ಏರ್ ಲಿಫ್ಟ್ ಕಾರ್ಯಾಚರಣೆ: ವಿಮಾನದಲ್ಲೇ ಭಾರತ್ ಮಾತಾ ಕಿ ಜೈ ಎಂದ ಸಂತ್ರಸ್ಥರು
ಕಾಬೂಲ್: ಆಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಅಫ್ಘಾನಿಸ್ತಾನ ತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಪ್ರಮುಖವಾಗಿ ಭಾರತೀಯ ರಕ್ಷಣಾ ಏರ್ ಲಿಫ್ಟ್ ಕಾರ್ಯಾಚರಣೆ ಭರದಿಂದ ಸಾಗಿದೆ.
87 ಭಾರತೀಯರು ಕಾಬೂಲ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗುತ್ತಿದ್ದು, ವಿಮಾನದಲ್ಲಿಯೇ ಸಂತ್ರಸ್ಥರೆಲ್ಲರೂ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ. ಏರ್ ಇಂಡಿಯಾ 1956 ವಿಮಾನದಲ್ಲಿ 87 ಭಾರತೀಯರು ತಜಕಿಸ್ತಾನದ ಮೂಲಕ ನವದೆಹಲಿಗೆ ಮರಳುತ್ತಿದೆ. ಈ ವಿಮಾನದಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಇದ್ದು ಐಎಎಫ್ ಏರ್ಕ್ರಾಫ್ಟ್ ಮೂಲಕ ಕಾಬೂಲ್ನಿಂದ ಪ್ರಯಾಣಿಕರನ್ನು ಹೊರ ಒಯ್ಯಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಅಫ್ಗಾನಿಸ್ತಾನದಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಏರ್ ಇಂಡಿಯಾ 1956 ವಿಮಾನದ ಮೂಲಕ 87 ಭಾರತೀಯರು ತಜಕಿಸ್ತಾನದಿಂದ ನವದೆಹಲಿಗೆ ಹೊರಟಿದ್ದಾರೆ. ಇದರಲ್ಲಿ ಇಬ್ಬರು ನೇಪಾಳಿಯರು ಇದ್ದಾರೆ. ತಜಕಿಸ್ತಾನದ ದುಶಂಬೆಯಲ್ಲಿರುವ ಭಾರತೀಯ ದೂತವಾಸ ನಿರೀಕ್ಷಿತ ಸಹಾಯ ಮತ್ತು ಸಲಹೆ ನೀಡಿದರು. ಹೆಚ್ಚಿನ ಸ್ಥಳಾಂತರ ಕಾರ್ಯ ಮುಂದುವರಿದಿದೆ ಎಂದು ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ ಎಂದು ‘ಎಎನ್ಐ’ ವರದಿ ಮಾಡಿದೆ.
90 ಪ್ರಯಾಣಿಕರೊಂದಿಗೆ ಹೊರಟ ಐಎಎಫ್ ವಿಮಾನ
ಭಾರತೀಯ ವಾಯುಪಡೆಯ ವಿಮಾನವು ಶನಿವಾರ ಸುಮಾರು 90 ಭಾರತೀಯರೊಂದಿಗೆ ಕಾಬೂಲ್ನಿಂದ ಹೊರಟಿತ್ತು. ಮತ್ತಷ್ಟು ಭಾರತೀಯರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಾಂತರಗೊಳ್ಳಲು ಕಾದಿದ್ದವರನ್ನು ಹೊತ್ತ C-130J ಸಾರಿಗೆ ವಿಮಾನವು ಕಾಬೂಲ್ನಿಂದ ಸ್ಥಳಾಂತರಗೊಂಡವರೊಂದಿಗೆ ಶನಿವಾರ ಹೊರಟಿದೆ. ಹೆಚ್ಚಿನ ರಕ್ಷಣಾ ಕಾರ್ಯಾಚರಣೆಗಳನ್ನು ಯೋಜಿಸಲಾಗುತ್ತಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಹೇಳಿದರು. ಆದರೆ ಸ್ಥಳಾಂತರಿಸುವ ಕಾರ್ಯಾಚರಣೆಯ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.
ತಾಲಿಬಾನ್ ಕಾಬೂಲ್ ವಶಪಡಿಸಿಕೊಂಡ ನಂತರ ಭಾನುವಾರ ರಾತ್ರಿ ಏರ್ ಇಂಡಿಯಾ ವಿಮಾನದ ಮೂಲಕ ಭಾರತ ಸುಮಾರು 129 ಭಾರತೀಯ ಮತ್ತು ಅಫ್ಘಾನ್ ಪ್ರಜೆಗಳನ್ನು ಸ್ಥಳಾಂತರಿಸಿತು. ನಂತರ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳನ್ನು ಅನುಮತಿಸಲಾಗಲಿಲ್ಲ, ಐಎಎಫ್ನ ಎರಡು ಸಿ -17 ವಿಮಾನಗಳು ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಸೇರಿದಂತೆ 180 ಜನರನ್ನು ಸ್ಥಳಾಂತರಿಸಿತು. ತಾಲಿಬಾನ್ ಭಾನುವಾರ ಕಾಬೂಲ್ ಪ್ರವೇಶಿಸಿ ಸ್ವಾಧೀನಪಡಿಸಿಕೊಂಡಿತು, ನಂತರ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದರು.