ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನ
ಲಖನೌ: ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಸಿಎಂ, ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ (89) ಆ.21 ರಂದು ನಿಧನರಾದರು.
ಸೆಪ್ಸಿಸ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಕಲ್ಯಾಣ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಲಖನೌ ನಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಎಸ್ ಜಿಪಿಜಿಐ)ನಲ್ಲಿ ಕಲ್ಯಾಣ್ ಸಿಂಗ್ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು.
ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಕಲ್ಯಾಣ್ ಸಿಂಗ್ ಅವರು ಸಮಾಜದ ಹಿಂದುಳಿದ ವರ್ಗದ ಕೋಟ್ಯಾಂತರ ಜನರ ಧ್ವನಿಯಾಗಿದ್ದರು. ರೈತರ, ಯುವಜನರ ಸಬಲೀಕರಣಕ್ಕೆ ಕಲ್ಯಾಣ್ ಸಿಂಗ್ ಶ್ರಮಿಸಿದ್ದಾರೆ. ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ. ಕಲ್ಯಾಣ್ ಸಿಂಗ್ ಅವರು ಮುತ್ಸದ್ದಿ, ಹಿರಿಯ ಆಡಳಿತಗಾರ, ಶ್ರೇಷ್ಠ ವ್ಯಕ್ತಿ” ಎಂದು ಮೋದಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.