ಆ.23ಕ್ಕೆ ಶಾಲೆ ಪುನಾರಂಭ: ಮಕ್ಕಳ ಬಗ್ಗೆ ನಿಗಾ ಇರಿಸಿ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಂದಿನ ಸೋಮವಾರ ರಾಜ್ಯಾದ್ಯಂತ 9ರಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಖಾಸಗಿ ಶಾಲೆಗೆ ಮಕ್ಕಳನ್ನು ಯಾವ ರೀತಿ ಕರೆತರಬೇಕು, ತರಗತಿಯಲ್ಲಿ ಯಾವ ರೀತಿ ಕೂರಿಸಬೇಕು, ಮಕ್ಕಳು ಶಾಲೆಯಲ್ಲಿ ಯಾವ ರೀತಿ ಇರಬೇಕು, ಶಿಕ್ಷಕರು ಯಾವ ರೀತಿ ಮುಂಗಾಗ್ರತಾ ಕೊರೋನಾ ನಿಯಮಗಳನ್ನು ಪಾಲಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಪಾಲಕರ ಅನುಮತಿ ಪಡೆದೇ ಶಾಲೆಗೆ ಬರಬೇಕು ಎಂದು ಹೇಳಿದ್ದಾರೆ.

ಖುದ್ದು ಭೇಟಿ ನೀಡುತ್ತೇನೆ: ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರ ಜೊತೆ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ನೋಡುತ್ತೇನೆ. ಕೋವಿಡ್ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮಕ್ಕಳು ಶಾಲೆಗೆ ಬಂದು ಕಲಿಕೆಯಾಗಬೇಕು, ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ, ನಿಧಾನವಾಗಿ ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಶಾಲೆ ಪ್ರಾರಂಭಿಸುತ್ತಿದ್ದೇವೆ ಎಂದರು.

ಲಸಿಕೆ ಹಾಕಿಸಿಕೊಳ್ಳಿ: ಪೋಷಕರು ನಿರ್ಲಕ್ಷ್ಯ ತೋರದೆ, ಹಿಂಜರಿಯದೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ, ಮಕ್ಕಳ ಆರೋಗ್ಯ ಬಗ್ಗೆ ಗಮನ ಇರಲಿ, ಶಾಲೆಗೆ ಹೋಗಿ ಬಂದ ಮೇಲೆ ಮಕ್ಕಳ ಮೇಲೆ ನಿಗಾ ಇರಿಸಿ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!