‘ಗಾಳಿಯಿಂದ ಹರಡುತ್ತಿದೆ ಕೊರೊನಾ ಸೋಂಕು’: ಮಾರ್ಗಸೂಚಿ ಬದಲಿಸಲು ವಿಜ್ಞಾನಿಗಳ ಮನವಿ

ಗಾಳಿಯಲ್ಲಿರುವ ಕೊರೊನಾ ವೈರಸ್‌ನ ಅತಿಸಣ್ಣ‌ ಜೀವಕಣಗಳು ಮನುಷ್ಯರಿಗೆ ಸೋಂಕು ಉಂಟು ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಶಿಫಾರಸುಗಳಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ’ ಎಂದು ನೂರಾರು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ವರದಿಯಲ್ಲಿ ಹೇಳಿದ್ದಾರೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.
ಸೋಂಕಿತರು ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡುವಾಗ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ದ್ರವಕಣಗಳಿಂದಾಗಿ ಕೊರೊನಾ ವೈರಸ್‌ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು. 

‘ಗಾಳಿಯಲ್ಲಿರುವ ಅತಿಸಣ್ಣ ಕಣಗಳಿಂದಲೂ ಸೋಂಕು ಹರಡುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದಿರುವ ಬಹಿರಂಗ ಪತ್ರದಲ್ಲಿ 32 ದೇಶಗಳ 239 ವಿಜ್ಞಾನಿಗಳು ಹೇಳಿದ್ದಾರೆ. ಈ ಪತ್ರವನ್ನು ಮುಂದಿನ ದಿನಗಳಲ್ಲಿ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟಿಸುವ ಉದ್ದೇಶವೂ ವಿಜ್ಞಾನಿಗಳಿಗೆ ಇದೆ.

ಈ ಕುರಿತು ರಾಯಿಟರ್ಸ್‌ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿಶ್ವ ಆರೋಗ್ಯ ಸಂಸ್ಥೆಯು ನಿರಾಕರಿಸಿದೆ.

ಸೀನಿದಾಗ ಹೊರಬರುವ ದ್ರವಕಣಗಳ ಗುಳ್ಳೆಗಳು ಗಾಳಿಯಲ್ಲಿ ಹಿಗ್ಗುತ್ತವೆ. ಸೀನಿದಾಗ ವೇಗವಾಗಿ ಹೊರಬೀಳುವ ದ್ರವಕಣಗಳು ಒಂದು ಕೊಠಡಿಯಷ್ಟು ದೊಡ್ಡದಾಗಿ ಹರಡಿಕೊಳ್ಳುತ್ತವೆ. ದೂರಕ್ಕೆ ಕ್ರಮಿಸುತ್ತವೆ. ಇಂಥ ಅತಿಸೂಕ್ಷ್ಮ ಕಣಗಳು ಗಾಳಿಯಲ್ಲಿ ತೇಲುತ್ತಾ ಮತ್ತೊಬ್ಬರ ದೇಹ ಪ್ರವೇಶಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಗಾಳಿಯಿಂದ ಸೋಕು ಹರಡುತ್ತದೆ ಎಂದು ನಂಬಲು ಸಾಕಷ್ಟು ಆಧಾರಗಳಿಲ್ಲ’ ಎಂದೇ ವಿಶ್ವ ಆರೋಗ್ಯ ಸಂಸ್ಥೆಯು ‘ನ್ಯೂಯಾರ್ಕ್‌ ಟೈಮ್ಸ್‌’ಗೆ ಪ್ರತಿಕ್ರಿಯಿಸಿದೆ.

‘ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತದೆ ಎಂಬುದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ಆದರೆ ಈ ಪ್ರತಿಪಾದನೆಗೆ ಈವರೆಗೆ ಗಟ್ಟಿ ಆಧಾರಗಳು ದೊರೆದಿಲ್ಲ’ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!