ಒಲಂಪಿಕ್ಸ್: ಜಾವೆಲಿನ್ ಥ್ರೋದಲ್ಲಿ ಭಾರತಕ್ಕೆ ಚಿನ್ನದ ಪದಕ- ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಟೋಕಿಯೋ(ಆ.07): ಈ ಬಾರಿಯ ಒಲಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ ಲಭಿಸಿದೆ. ಜಾವೆಲಿನ್ ತ್ರೋ ನಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಪರ ಅಥ್ಲೆಟಿಕ್ಸ್ನಲ್ಲಿ ಮೊದಲ ಪದಕ ಗೆದ್ದ ಇತಿಹಾಸ ಬರೆದಿದ್ದಾರೆ.
ಅರ್ಹತಾ ಸುತ್ತಿನಲ್ಲಿಯೇ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದಿದ್ದ ಇವರು, ಜಾವೆಲಿನ್ ತ್ರೋ ಫೈನಲ್ ಪ್ರವೇಶಿಸುವ ಮೂಲಕ ಭರವಸೆ ಹುಟ್ಟಿಸಿದ್ದರು. ಇದೀಗ ನೀರಜ್ ಚೋಪ್ರಾ ಚಿನ್ನದ ಪದಕದ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದ ಅವರು ಮೂರನೇ ಪ್ರಯತ್ನದಲ್ಲಿ 76.79 ಮೀಟರ್ ಎಸೆದು ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ.
ಭಾರತದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದುಕೊಂಡಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಬಂಗಾರದ ಪದಕ ಗೆದ್ದುಕೊಂಡಿದ್ದರು.
1900ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾರ್ಮನ್ ಪ್ರಿಟ್ಚಾರ್ಡ್ 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಆ ಪದಕಗಳನ್ನು ಇನ್ನೂ ಭಾರತದ ಹೆಸರಿನಲ್ಲೆ ಗುರುತಿಸುತ್ತಿದೆ. ಆದರೆ ಹಲವು ಸಂಶೋಧನೆಗಳು ನಡೆದಿದ್ದು, ನಾರ್ಮನ್ ಆ ಒಲಿಂಪಿಕ್ಸ್ನಲ್ಲಿ ಗ್ರೇಟ್ ಬ್ರಿಟನ್ ಪರ ಸ್ಪರ್ಧಿಸಿದ್ದರು ಎನ್ನಲಾಗಿದೆ. ಹೀಗಾಗಿ, ನೀರಜ್ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಪರ ಅಥ್ಲೆಟಿಕ್ಸ್ನಲ್ಲಿ ಮೊದಲ ಪದಕ ಗೆದ್ದ ಇತಿಹಾಸ ಬರೆದಿದ್ದಾರೆ.