ಆರ್’ಬಿಐ ವಿತ್ತೀಯ ನೀತಿ ಪ್ರಕಟ: ಸತತ ಏಳನೇ ಬಾರಿ ರೆಪೊ ದರ ಯಥಾಸ್ಥಿತಿ ಮುಂದುವರಿಕೆ
ಮುಂಬೈ: ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಇನ್ನೂ ಆರ್ಥಿಕ ಪುನಶ್ಚೇತನವಾಗದಿರುವ ಸಂದರ್ಭದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲು ಆರ್ ಬಿಐ ನಿರ್ಧರಿಸಿದೆ.
ಇಂದು ಮುಂಬೈಯಲ್ಲಿ ಆರ್ ಬಿಐಯ ವಿತ್ತೀಯ ನೀತಿ ಪ್ರಕಟಿಸಿದ ಗವರ್ನರ್ ಶಕ್ತಿಕಾಂತ್ ದಾಸ್, ರೆಪೊ ದರ ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಮುಂದವರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು. ಈ ರೀತಿ ಸತತ ಏಳನೇ ಬಾರಿ ಆರ್ ಬಿಐ ವಿತ್ತೀಯ ದರದ ಯಥಾಸ್ಥಿತಿ ಕಾಯ್ದುಕೊಂಡು ಬಂದಿದೆ. ಕಳೆದ ವರ್ಷ ಮೇ 22ರಂದು ವಿತ್ತೀಯ ದರವನ್ನು ಆರ್ ಬಿಐ ಪರಿಷ್ಕರಿಸಿತ್ತು.
ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್‌ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ ತಡೆಹಿಡಿಯುತ್ತದೆ ಎಂದು ಇಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರು ಸದಸ್ಯರ ಹಣಕಾಸು ವಿತ್ತೀಯ ನೀತಿಯ ಮೂರು ದಿನಗಳ ಸಭೆ ಮುಗಿದ ಬಳಿಕ ಹೇಳಿದರು.
ಬಡ್ಡಿದರ ಬದಲಾಗದೆ ಇರಿಸಲು ವಿತ್ತೀಯ ನೀತಿ ಸಮಿತಿ(ಎಂಪಿಸಿ) ಸರ್ವಾನುಮತದಿಂದ ಮತ ಚಲಾಯಿಸಿತು. ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಹಣದುಬ್ಬರವನ್ನು ಗುರಿಯೊಳಗೆ ಉಳಿಸಿಕೊಳ್ಳಲು ಅಗತ್ಯವಿದ್ದಷ್ಟು ಕಾಲ ತನ್ನ ಸೌಕರ್ಯದ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ದಾಸ್ ಹೇಳಿದರು.
ವಿತ್ತೀಯ ನೀತಿ ಸಮಿತಿಗೆ ವಾರ್ಷಿಕ ಹಣದುಬ್ಬರವನ್ನು ಮಾರ್ಚ್ 31, 2026ರವರೆಗೆ ಶೇಕಡಾ 4ರಷ್ಟು ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ.
ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.