ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆಯಿಂದ ರಾಜ್ಯ ಬಿಜೆಪಿ ಸರ್ಕಾರ ರಚನೆ: ಸುರ್ಜೆವಾಲ
ಹುಬ್ಬಳ್ಳಿ: ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಹಾಗೂ ಪಕ್ಷಾಂತರದ ಮೇಲೆ ರಚನೆಯಾಗಿದೆ. ಕಳೆದ ಕೆಲವು ದಿನಗಳಿಂದ ಇದು ಪೆಗಾಸಸ್ ಕದ್ದಾಲಿಕೆಯಿಂದ ರಚನೆಯಾಗಿದೆ ಎಂಬುದು ಸಾಬೀತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶ ಹಾಗೂ ವಿಶ್ವ, ಮೋದಿ ಸರ್ಕಾರ ಹೇಗೆ ಗೂಢಚಾರಿಗಳನ್ನು ಬಳಸಿಕೊಂಡು ಹೇಗೆ ಚುನಾಯಿತ ಸರ್ಕಾರವನ್ನು ಕೆಡವಿದೆ ಎಂಬುದನ್ನು ನೋಡಿದೆ. ಇಂತಹ ಸರ್ಕಾರ ಜನಪರ ಕೆಲಸ ಮಾಡಲು ಅಸಾಧ್ಯ. ಹೀಗಾಗಿ 2 ವರ್ಷಗಳ ಅವಧಿಯಲ್ಲಿ ಕೇವಲ ಭ್ರಷ್ಟಾಚಾರಗಳೇ ನಡೆದಿವೆ. ಇದೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ಆರ್ಟಿಜಿಎಸ್ ಮೂಲಕ ನಡೆಸಿರುವುದನ್ನು ನೋಡಿದ್ದೇವೆಂದು ಕುಟುಕಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯವನ್ನು ಶ್ಲಾಘಿಸುತ್ತೇನೆ. ದೇಶದಲ್ಲೇ ಅತಿ ದೊಡ್ಡ ಸರ್ಕಾರೇತರ ಆರೋಗ್ಯ ಸೇವೆ ಆರೋಗ್ಯ ಹಸ್ತವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ದೇಶದಲ್ಲಿ ಜನ ಆಕ್ಸಿಜನ್ ಇಲ್ಲದೆ ಸಾಯುತ್ತಿರುವಾಗ ಸರ್ಕಾರ ನೆರವಾಗದೇ ಕೈಚೆಲ್ಲಿ ಕೂತಿತ್ತು. ಈ ಸಮಯದಲ್ಲಿ ಜನರಿಗೆ ಆಕ್ಸಿಜನ್, ರೆಮಡಿಸಿವಿರ್ ಔಷಧಿ ಪೂರೈಸಿದ್ದು ಕಾಂಗ್ರೆಸ್ ನಾಯಕರು. ಆಸ್ಪತ್ರೆಗಳು ಹೆಚ್ಚಿನ ಸುಲಿಗೆ ಮಾಡುವಾಗ ನಮ್ಮ ನಾಯಕರು ತಮ್ಮ ಆಸ್ಪತ್ರೆಗಳಲ್ಲಿ ಕಡಿಮೆ ಮೊತ್ತಕ್ಕೆ ಚಿಕಿತ್ಸೆ ನೀಡಿದರು ಎಂದು ಸುರ್ಜೆವಾಲಾ ತಿಳಿಸಿದರು.
ಬಿಜೆಪಿಯು ಹಿಂದುಳಿದ ವರ್ಗಗಳ, ಬಡವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ವಿರೋಧಿಗಳು. ಬಿಜೆಪಿ ಈ ವರ್ಗಗಳ ಕಲ್ಯಾಣಕ್ಕೆ ಯಾವುದೇ ಕಾರ್ಯಯೋಜನೆ ತಂದಿಲ್ಲ. ಆದರೆ ಈಗ ಪ್ರಧಾನಿಗಳು ಟ್ವಿಟರ್ ಮೂಲಕ ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು 1952ರಲ್ಲಿ ಶೇ.2ರಷ್ಟಿಂದ ಆರಂಭ ಮಾಡಲಾಯಿತು. ನಂತರ 1981ರಿಂದ ಶೇ.10ರಷ್ಟು ಮೀಸಲಾತಿ ನೀಡಲಾಯಿತು. ನಂತರ ಕಾಂಗ್ರೆಸ್ ಸರ್ಕಾರ ಮಂಡಲ್ ಸಮಿತಿ ರಚಿಸಿತು. 1995-96 ರಲ್ಲಿ ಶೇ.27 ರಷ್ಟು ಮೀಸಲಾತಿ ನೀಡಿದೆವು. ಪಂಡಿತ್ ನೆಹರೂ, ವಲ್ಲಭಬಾಯ್ ಪಟೇಲ್, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ತಂದಿದ್ದರು. ಈ ಮೀಸಲಾತಿ ವೈದ್ಯಕೀಯ ಶಿಕ್ಷಣಕ್ಕೆ ಅನ್ವಯವಾಗಿರಲಿಲ್ಲ. 2007ರಲ್ಲಿಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ನಾಯಕಿ ಸೋನಿಯಾ ಗಾಂಧಿ ಅವರು ಈ ಬಗ್ಗೆ ನಿರ್ಧಾರ ಕೈಗೊಂಡು, ಹಿಂದುಳಿದ ವರ್ಗಗಳಿಗೆ ಕಡ್ಡಾಯವಾಗಿ ಎಲ್ಲ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಕಾನೂನು ಜಾರಿಗೆ ತಂದರು. ಪ್ರಧಾನಿ ಮೋದಿ ಅವರು 2014 ರ ಚುನಾವಣೆಯಲ್ಲಿ ತಮ್ಮ ಸಮುದಾಯವನ್ನು ಚುನಾವಣೆಗೂ ಮುನ್ನ ಹಿಂದುಳಿದ ವರ್ಗ ಎಂದು ಮಾಡಿ ತಾನು ಹಿಂದುಳಿದ ವರ್ಗದವನು ಎಂದು ಹೇಳಿಕೊಂಡರು. 7 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ. ನಂತರ ಸೋನಿಯಾ ಗಾಂಧಿ ಅವರು ಪ್ರಧಾನ ಮಂತ್ರಿಗಳಿಗೆ ಜುಲೈ 3,2020 ರಂದು ಪತ್ರ ಬರೆದು ಈ ವರ್ಗದವರಿಗೆ ಮೀಸಲಾತಿ ನೀಡಿ, ಅದು ಸಂವಿಧಾನಬದ್ಧವಾಗಿದೆ ಎಂದು ಹೇಳಿದ್ದರು. ಪ್ರಧಾನಮಂತ್ರಿಗಳು ಇದಕ್ಕೆ ಪ್ರತ್ಯುತ್ತರ ನೀಡಲಿಲ್ಲ ಎಂದರು.
27 ಜುಲೈ 2020 ರಲ್ಲಿ ಹಾಗೂ ನಂತರ ವಿದ್ಯಾರ್ಥಿಯೊಬ್ಬಳು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ, ಕೇಂದ್ರ ಸರ್ಕಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದನ್ನು ಪ್ರಶ್ನಿಸಿದರು. ನಂತರ ಕೋರ್ಟ್ ಈ ಮೀಸಲಾತಿಯನ್ನು ಜಾರಿಗೊಳಿಸು ವಂತೆ ಆದೇಶ ನೀಡಿತು. ನಂತರ ಕಾಂಗ್ರೆಸ್ ಹಾಗೂ ಡಿಎಂಕೆ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದರು. ಈಗ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ಪಾರಾಗಲು ಆ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ.ಇದು ಬಿಜೆಪಿಯ ಸುಳ್ಳಿನ ಪ್ರಚಾರಕ್ಕೆ ಸಾಕ್ಷಿ.ಅಸ್ಸಾಂ ಹಾಗೂ ಮಿಜೋರಾಮ್ ನಡುವಣ ಸಂಘರ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಎರಡೂ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವೇ ಅಧಿಕಾರದಲ್ಲಿದೆ. ಗೃಹ ಸಚಿವರು 10-12 ದಿನಗಳ ಹಿಂದಷ್ಟೇ ಇಲ್ಲಿಗೆ ಭೇಟಿ ನೀಡಿದ್ದರು ಹಾಗೂ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು. ಆದರೂ ಎರಡೂ ರಾಜ್ಯಗಳ ಪೊಲೀಸರು ಪರಸ್ಪರ ಗುಂಡು ಹಾರಿಸಿಕೊಳ್ಲುವಂತೆ ಮಾಡಿದ್ದು ಯಾಕೆ? 73 ನರ್ಷಗಳ ಸ್ವತಂತ್ರ ಭಾರತದಲ್ಲಿ ಇಂತಹ ಘಟನೆ ಎಂದಾದರೂ ನಡೆದಿತ್ತಾ? ನಾವು ಶತ್ರು ರಾಷ್ಟ್ರಗಳ ಜತೆ ಸೆಣೆಸಾಡಬೇಕಾ? ಅಥವಾ ನಮ್ಮ ದೇಶದ ಸಹೋದರರ ಜತೆ ಸೆಣೆಸಾಡಬೇಕಾ? ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ನಡುವಣ ವ್ಯತ್ಯಾಸ ಇದೇ. ಇದು ಗೃಹ ಸಚಿವರು ಹಾಗೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ವೈಫಲ್ಯ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಜನರ ಪ್ರಾಣ ಒತ್ತೆ ಇಟ್ಟು ಈ ಸಮರ ಸಾರುತ್ತಿದ್ದಾರಾ? ಇವರ ವಿರುದ್ಧ ಜೆ.ಪಿ ನಡ್ಡಾ ಅವರಾಗಲಿ, ಪ್ರಧಾನಿ ಅವರಾಗಲಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿಯವರು ದೇಶವನ್ನು ಮುನ್ನಡೆಸುವ ರೀತಿ ಇದೇನಾ? ಅಮಿತ್ ಶಾರಂತೆ ದೇಶದ ಯಾವುದೇ ಗೃಹ ಸಚಿವರು ಈ ರೀತಿ ವಿಫಲರಾಗಿರಲಿಲ್ಲ. ಅವರು ಕೇವಲ ಕದ್ದಾಲಿಕೆಯಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಬಿಜೆಪಿಯನ್ನು ಸುರ್ಜೆವಾಲಾ ಕಟುವಾಗಿ ಟೀಕಿಸಿದರು.