ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದ 3 ಡ್ರೋನ್ ಅನುಮಾನಾಸ್ಪದ ಹಾರಾಟ- ಸೇನೆಯಿಂದ ದಾಳಿ

ಜಮ್ಮು: ಭಾರತದ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಡ್ರೋನ್’ಗಳ ಹಾರಾಟ ಹೆಚ್ಚಾಗಿದ್ದು, ಗುರುವಾರ ರಾತ್ರಿ 8.30-9.30ರ ಸಮಯದಲ್ಲಿ ಸಾಂಬಾ ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಸಾಂಬಾ ಅಂತರಾಷ್ಟ್ರೀಯ ಗಡಿ ಪ್ರದೇಶ, ಐಟಿಬಿಪಿ ಕ್ಯಾಂಪ್, ಸಾಂಬಾದ ಆರ್ಮಿ ಕ್ಯಾಂಪ್ ಬಳಿ ಡ್ರೋನ್ ಹಾರಾಟ ಪತ್ತೆಯಾಗಿವೆ. ಮೂರು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಪತ್ತೆಯಾಗಿದ್ದು, ಇವು ಪಾಕಿಸ್ತಾನಕ್ಕೆ ಸೇರಿರಬಹುದು ಎಂಬ ಶಂಕೆಗಳೂ ವ್ಯಕ್ತವಾಗಿವೆ. 

ಬಡೀ–ಬ್ರಾಹ್ಮಣ, ಚಿಲಾದ್ಯ ಮತ್ತು ಗಗ್ವಾಲ್‌ ಪ್ರದೇಶಗಳಲ್ಲಿ ಗುರುವಾರ ರಾತ್ರಿ 8.30ರ ವೇಳೆಗೆ ಏಕಕಾಲದಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ಚಿಲಾದ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಡ್ರೋನ್‌ ಗುರಿಯಾಗಿಸಿ ಗಡಿಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಅದು ತಪ್ಪಿಸಿಕೊಂಡು ಪಾಕಿಸ್ತಾನದತ್ತ ತೆರಳಿದೆ. ಇತರ ಎರಡು ಡ್ರೋಣ್ಗಳೂ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವಾರವಷ್ಟೇ ಜಮ್ಮು ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಭಾಗದ ಕಂಚಕ್‌ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋನ್‌ ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದರು. ಡ್ರೋನ್‌ನಿಂದ ಸ್ಫೋಟಕಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.

ಜೂನ್‌ನಲ್ಲಿ ಸ್ಫೋಟಕಗಳನ್ನು ಹೊತ್ತು ಬಂದ ಡ್ರೋನ್‌ಗಳು ಜಮ್ಮು ವಾಯುನೆಲೆಗೆ ಅಪ್ಪಳಿಸಿದ್ದವು. ಇದು ಪಾಕಿಸ್ತಾನದ ಕೃತ್ಯ ಎಂದು ಅಧಿಕಾರಿಗಳು ಹೇಳಿದ್ದರು

Leave a Reply

Your email address will not be published. Required fields are marked *

error: Content is protected !!