ಅದಾನಿ ಒಡೆತನಕ್ಕೆ ಹಣ ಹೂಡಿದ 4 ಕಂಪೆನಿಗಳು ಅವ್ಯವಹಾರಗಳಲ್ಲಿ ಭಾಗಿ!
ಪೋರ್ಟ್ ಲೂಯಿಸ್, ಜು.28: ಅದಾನಿ ಸಾಮ್ರಾಜ್ಯದಲ್ಲಿ ಹಣ ಹೂಡಿದ 4 ಕಂಪೆನಿಗಳು ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಬಗ್ಗೆ ವರದಿಯಾಗಿದೆ.
ಭಾರತೀಯ ಬಿಲಿನಿಯರ್ ಉದ್ಯಮಿ ಗೌತಮ್ ಅದಾನಿ ಒಡೆತನದ ಕಂಪೆನಿಗಳಲ್ಲಿ ಬಹುತೇಕ ತಮ್ಮ ಎಲ್ಲ ಹಣವನ್ನು ಹೂಡಿ ಗಮನ ಸೆಳೆದಿರುವ ಮಾರಿಶಸ್ನ ನಾಲ್ಕು ಕಂಪೆನಿಗಳು ಹಿಂದೆಯೂ ವಿವಾದಗ್ರಸ್ತ ಕಂಪೆನಿಗಳಲ್ಲಿ ಹಣ ಹೂಡಿರುವ ಪ್ರಕರಣಗಳಿವೆ.
ಹಣ ಗುಳುಂ ಮಾಡಿರುವ ಅಥವಾ ನಿಯಮ ಉಲ್ಲಂಘನೆಗಳಿಗಾಗಿ ತನಿಖೆ ಎದುರಿಸುತ್ತಿರುವ ಕಂಪೆನಿಗಳಲ್ಲಿ ಮಾರಿಷಸ್ನ ಈ ಕಂಪೆನಿಗಳು ಹೂಡಿಕೆ ಮಾಡಿರುವುದು ಬಹಿರಂಗವಾಗಿದೆ. ಎಲಾರ ಇಂಡಿಯ ಆಪರ್ಚುನಿಟೀಸ್ ಫಂಡ್, ಕ್ರೆಸ್ಟಾ ಫಂಡ್, ಅಲ್ಬುಲ ಇನ್ವೆಸ್ಟ್ ಮೆಂಟ್ ಫಂಡ್ ಮತ್ತು ಎಪಿಎನ್ಎಸ್ ಇನ್ವೆಸ್ಟ್ ಮೆಂಟ್ ಫಂಡ್ ಕಂಪೆನಿಗಳು ತೆರಿಗೆ ರಹಿತ ಮಾರಿಷಸ್ ನಲ್ಲಿ ನೋಂದಾವಣೆಯಾಗಿರುವುದರಿಂದ ಅವುಗಳ ಮಾಲೀಕರಿಗೆ ಸಂಬಂಧಿಸಿದ ವಿವರಗಳು ಅಪಾರದರ್ಶಕವಾಗಿವೆ.
ಹಣ ಸಾಗಣೆಗೆ ಸಂಬಂಧಿಸಿ ಕ್ರೆಸ್ಟಾ, ಅಲ್ಬುಲ ಮತ್ತು ಎಲಾರ ಕಂಪೆನಿಗಳು ಕನಿಷ್ಠ ಒಂದು ಬಾರಿ ವಿಚಾರಣೆಯನ್ನು ಎದುರಿಸಿವೆ ಎಂಬುದಾಗಿ ‘ಫಸ್ಟ್ ಪೋಸ್ಟ್’ ವೆಬ್ಸೈಟ್ 2018ರಲ್ಲಿ ವರದಿ ಮಾಡಿದೆ. ತಮ್ಮ 6.9 ಬಿಲಿಯ ಡಾಲರ್ ಹಣದ ಸುಮಾರು 90 ಶೇ. ಅದಾನಿ ಸಾಮ್ರಾಜ್ಯದಲ್ಲಿ ಹೂಡಿಕೆ ಮಾಡುವ ಮುನ್ನ ಈ ಕಂಪೆನಿಗಳು ಇನ್ನೂ ನಾಲ್ಕು ಕಂಪೆನಿಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆಗಳನ್ನು ಮಾಡಿದ್ದವು. ಈ ಪೈಕಿ ಎರಡು ಕಂಪೆನಿಗಳ ಸ್ಥಾಪಕರು ಈಗ ಭಾರತದಿಂದ ಪರಾರಿಯಾಗಿದ್ದಾರೆ ಹಾಗೂ ಅವರ ವಿರುದ್ಧ ಕಪ್ಪು ಹಣ ಬಿಳುಪು ಮಾಡಿದ ಆರೋಪದ ವಿಚಾರಣೆ ನಡೆಯುತ್ತಿದೆ.
ಮಾರಿಶಸ್ ಕಂಪೆನಿಗಳು ಹೂಡಿಕೆ ಮಾಡಿರುವ ಇನ್ನೊಂದು ಕಂಪೆನಿ ದಿವಾಳಿಯಾಗಿದೆ ಹಾಗೂ ನಾಲ್ಕನೇ ಕಂಪೆನಿಯು ಇಥಿಯೋಪಿಯ ಸರಕಾರದೊಂದಿಗೆ ಜಗಳಕ್ಕಿಳಿದ ಬಳಿಕ ಅದರ ಆಸ್ತಿ ಮತ್ತು ಸೊತ್ತುಗಳನ್ನು ಮಾರಾಟ ಮಾಡಿ ಅದೇ ಕಂಪೆನಿಯ ಸಾಲವನ್ನು ತೀರಿಸಲಾಗಿದೆ.ಈ ನಡುವೆ ಅದಾನಿಯದೇ ಹಣವನ್ನು ಬಿಳುಪುಗೊಳಿಸಲು ಈ ಮಾರಿಶಸ್ ಹೂಡಿಕೆ ಕಂಪೆನಿಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕೆಂದು ಕೆಲವು ಸಂಸದರು ಬಯಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.