ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲಿ ಕೂಡ ಕಮೀಷನ್‌- ಶಶಿಕಲಾ ಜೊಲ್ಲೆ ರಾಜೀನಾಮೆಗೆ ವೆರೋನಿಕಾ ಆಗ್ರಹ

ಉಡುಪಿ: ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದಿಂದ ಕೊಡಮಾಡುವ ಮೊಟ್ಟೆ ಸರಬರಾಜು ಟೆಂಡರ್‌ ಪ್ರಕ್ರಿಯೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಮೊಟ್ಟೆ ಸರಬರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹಸ್ತಕ್ಷೇಪ ನಡೆಸಲು ಒಪ್ಪಿಕೊಂಡು, ಮಾಸಿಕ ಕೋಟಿ ರೂ.ಲಂಚಕ್ಕೆ ಬೇಡಿಕೆ ಇಟ್ಟಿರುವುದು ಟಿವಿ ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದ್ದು ಆ ನೆಲೆಯಲ್ಲಿ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸೂಕ್ತ ತನಿಕೆಗೆ ಅವಕಾಶ ಮಾಡಿಕೊಡಬೇಕು.

ಒರ್ವ ಮಹಿಳಾ ಸಚಿವೆಯಾಗಿ ಬಡ ಗರ್ಭಿಣಿ ಮಹಿಳೆಯರಿಗಾಗಿ ಸರ್ಕಾರ ನೀಡುವ ಮೊಟ್ಟೆಯಲ್ಲಿ ಕೂಡ ಸಚಿವೆ ಕಮೀಷನ್‌ ಪಡೆಯುತ್ತಿರುವುದು ನಾಚಿಕೆಗೇಡು. ದಿನಕ್ಕೊಂದು ಹಗರಣಗಳಲ್ಲಿ ತೊಡಗಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರದಿಂದ ಇನ್ನೊಂದು ಹಗರಣ ಬಯಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದ ಅವದಿಯಲ್ಲಿ ಜಾರಿಗೆ ಬಂದಿದ್ದ ಈ ಜನಪರ ಯೋಜನೆಯಡಿಯಲ್ಲಿ ಅಂಗನವಾಡಿಗಳ ಮೂಲಕ ಹಾಲಿನೊಂದಿಗೆ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿ ಧರ್ಮದ ನೆಲೆಗಟ್ಟಿನಲ್ಲಿ ಇದನ್ನು ವಿರೋಧಿಸುತ್ತ ಬಂದಿತ್ತು.ಇಂದು ಅದೇ ಪಕ್ಷದ ಸಚಿವೆಯೊಬ್ಬರು ಅದೇ ಮೊಟ್ಟೆಯಲ್ಲಿ ಹಣ ದೋಚಲು ನೋಡಿ, ಭ್ರಷ್ಠಾಚಾರಕ್ಕೆ ಕೈ ಚಾಚಿ, ಯೋಜನೆಯನ್ನು ಕುಲಗೆಡಿಸುತ್ತಿರುವುದು, ಸರಕಾರದ ಜನಪರ ಚಿಂತನೆಯ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!