ಬ್ಯಾಂಕ್‌ಗಳಿಗೆ ವಂಚನೆ- ನೀರವ್ ಮೋದಿ, ಚೋಕ್ಸಿ,ವಿಜಯ ಮಲ್ಯರ ಷೇರು ಮಾರಾಟ: 792.11ಕೋಟಿ ರೂ.ವಸೂಲಿ
ನವದೆಹಲಿ, ಜು17: ಕೋಟಿ ಕೋಟಿ ರೂ. ಸಾಲ ಪಡೆದು ದೇಶದ ಬ್ಯಾಂಕ್‌ಗಳಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ವಿಜಯ ಮಲ್ಯರ ಷೇರುಗಳ ಮಾರಾಟದಿಂದ 792.11ಕೋಟಿ ರೂ. ಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ವಸೂಲಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ವಿಜಯ್ ಮಲ್ಯ ಅವರಿಂದ ಬ್ಯಾಂಕ್ ಒಕ್ಕೂಟಕ್ಕೆ ಒಟ್ಟು 9,900 ಕೋಟಿ ರೂ. ಸುಸ್ತಿ ಸಾಲ ಬಾಕಿ ಇದೆ ಈ ಪೈಕಿ ಈಗಾಗಲೇ 5,824 ಕೋಟಿ ರೂ. ಹಾಗೂ 1,357 ಕೋಟಿ ರೂ. ಗಳನ್ನು ಪ್ರತ್ಯೇಕವಾಗಿ ವಸೂಲು ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಹಾಗೂ ಮೆಹುಲ್ ಚೀಕ್ಸಿ 13 ಸಾವಿರ ಕೋಟಿ ರೂ. ಪಾವತಿಸಬೇಕಿತ್ತು. ಇದಕ್ಕೂ ಮೊದಲು ಎಸ್‌ಬಿಐ ನೇತೃತ್ವದ ಒಕ್ಕೂಟವು ಆಸ್ತಿಗಳನ್ನು ಹರಾಜು ಮಾಡುವ ಮೂಲಕ 7 ,181 ಕೋಟಿ ರೂ. ಗಳನ್ನು ವಸೂಲಿ ಮಾಡಿತ್ತು. ಜಾರಿ ನಿರ್ದೇಶನಾಲಯವು ವಿಜಯ್ ಮಲ್ಯ ವಿರುದ್ದದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ನೀರವ್ ಮೋದಿ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯವು 1,060 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟು ಗೋಲು ಹಾಕಲು ಬ್ಯಾಂಕ್‌ಗಳಿಗೆ ಅನುಮತಿಸಿದೆ. ಜಾರಿ ನಿರ್ದೇಶನಾಲಯವು, ಆರ್ಥಿಕ ಅಪರಾಧ ಕಾಯ್ದೆಯ ನಿಬಂಧನೆಗಳ ಪ್ರಕಾರ 329.67 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಮೂರು ಆರೋಪಿ ಗಳ ಆಸ್ತಿ ಮಾರಾಟದಿಂದ 13,109 ಕೋಟಿ ರೂ. ವಸೂಲಿಯಾಗಿದೆ ಎಂದು ಇಡಿ ತಿಳಿಸಿದೆ.