6 ತಿಂಗಳಲ್ಲಿ ಮಾಧ್ಯಮವನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ-ಅಣ್ಣಾಮಲೈ
ಚೆನ್ನೈ: ‘ಮುಂದಿನ ಆರು ತಿಂಗಳಲ್ಲಿ ಮಾಧ್ಯಮವನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ’ ಎಂದು ತಮಿಳುನಾಡು ಬಿಜೆಪಿ ಘಟಕದ ನಿಯೋಜಿತ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ಅವರು ಶುಕ್ರವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಯಾವುದೇ ಮಾಧ್ಯಮ ಸಂಸ್ಥೆಯು ದೀರ್ಘ ಕಾಲ ಸುಳ್ಳು ಹರಡಲು ಸಾಧ್ಯವಿಲ್ಲ. ಸುಳ್ಳು ಸುದ್ದಿ ಹರಡುವಿಕೆಗೆ ಕಡಿವಾಣ ಹಾಕಲಾಗುವುದು ಎಂದು ಗುರುವಾರ ನಡೆದ ರೋಡ್ಶೋದಲ್ಲಿ ಹೇಳಿದ್ಧಾರೆ.
‘ನಮ್ಮ ಬಗ್ಗೆ ಸುಳ್ಳು ಸುದ್ದಿ ಬರೆಯುತ್ತಿರುವ ಮಾಧ್ಯಮಗಳನ್ನು ಮರೆತು ಬಿಡಿ… ಮುಂದಿನ ಆರು ತಿಂಗಳಲ್ಲಿ ಮಾಧ್ಯಮವನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ’ ಎಂದು ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಎಲ್.ಮುರುಗನ್ ಅವರು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಎಲ್ಲ ಮಾಧ್ಯಮವೂ ಅವರ ಕೈಕೆಳಗೇ ಬರುತ್ತದೆ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅಣ್ಣಾಮಲೈ ಹೇಳಿದ್ಧಾರೆ. ‘ಸುಳ್ಳು ಸುದ್ದಿಯನ್ನೇ ಮುಂದಿಟ್ಟುಕೊಂಡು ದೀರ್ಘ ಕಾಲ ರಾಜಕಾರಣ ಮಾಡಲಾಗದು’ ಎಂದಿದ್ದಾರೆ.
ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಈ ಹಿಂದೆಯೂ ವಿವಾದ ಸೃಷ್ಟಿಸಿದ್ದರು. ತಮಿಳುನಾಡು ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರ ಅಭ್ಯರ್ಥಿಯಾಗಿದ್ದ ಅವರು ಡಿಎಂಕೆ ಮುಖಂಡ ಸೆಂಥಿಲ್ ಬಾಲಾಜಿ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಣ್ಣಾಮಲೈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತ: ಇದು ಮಾಧ್ಯಮಕ್ಕೆ ಬಹಿರಂಗ ಬೆದರಿಕೆ ಎಂದು ಆಡಳಿತಾರೂಢ ಡಿಎಂಕೆ ಹೇಳಿದೆ. ಇದು ಮಾಧ್ಯಮವನ್ನು ಅದುಮಿಡುವ, ಬಹಿರಂಗವಾಗಿ ಬೆದರಿಸುವ ಕ್ರಮ. ಅಣ್ಣಾಮಲೈ ಹೇಳಿಕೆಯನ್ನು ಖಂಡಿಸುತ್ತೇವೆ