ಐಟಿ ಕಾಯ್ದೆಯ ಸೆಕ್ಷನ್ 66ಎ ಯ ಅಡಿಯಲ್ಲಿ ದಾಖಲಿಸಲಾದ ಪ್ರಕರಣ ಕೂಡಲೇ ಹಿಂಪಡೆಯಿರಿ- ಕೇಂದ್ರ ಸರಕಾರ ನಿರ್ದೇಶ

ಹೊಸದಿಲ್ಲಿ, ಜು.15: ಐಟಿ(ಮಾಹಿತಿ ತಂತ್ರಜ್ಞಾನ) ಕಾಯ್ದೆಯ ಸೆಕ್ಷನ್ 66ಎ ಯ ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳನ್ನು ಕೂಡಲೇ ಹಿಂಪಡೆಯುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ.

ರದ್ದುಗೊಳಿಸಲಾದ ಸೆಕ್ಷನ್ 66 ಎ ಯ ಅಡಿಯಲ್ಲಿ ಪ್ರಕರಣ ದಾಖಲಿಸದಿರಲು ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸಲಹೆ ಮಾಡಿದೆ. ಅಲ್ಲದೆ, ಸುಪ್ರೀಂ ಕೋಟ್ ನೀಡಿದ ನಿರ್ದೇಶನವನ್ನು ಅನುರಿಸರಿಸಲು ಸಂಸ್ಥೆಗಳನ್ನು ಜಾಗೃತಗೊಳಿಸುವಂತೆ ಕೂಡ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಈ ಸೆಕ್ಷನ್ ಅಡಿಯಲ್ಲಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್)’ ಸಲ್ಲಿಸಿದ ಅರ್ಜಿಯನ್ನು ಕಳೆದ ವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಫ್. ನಾರಿಮನ್, ಕೆ.ಎಂ. ಜೋಸೆಫ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ, ಈ ಸೆಕ್ಷನ್ ನನ್ನು ಈಗಲೂ ಜನರ ಮೇಲೆ ಹೇರುತ್ತಿರುವುದು ಆಘಾತಕಾರಿ ಹಾಗೂ ‘ಭಯಾನಕ’ ಎಂದು ಹೇಳಿತ್ತು.

2015ರ ಮಾ. 24ರಂದು ಶ್ರೇಯಾ ಸಿಂಘಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 66 ಎಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ಅಲ್ಲದೆ, ಈ ಸೆಕ್ಷನ್ ಅಸಾಂವಿಧಾನಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆ ಎಂದು ಅಭಿಪ್ರಾಯಿಸಿತ್ತು. ಸೆಕ್ಷನ್ 66 ಎಯನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ 6 ವರ್ಷದ ಬಳಿಕವೂ ಈ ಸೆಕ್ಷನ್ ಅನ್ನು ಹೇರುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿದ ಕೆಲವು ದಿನಗಳ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *

error: Content is protected !!