ಅಕ್ಟೋಬರ್-ನವೆಂಬರ್ ನಲ್ಲಿ ಕೋವಿಡ್-19 3ನೇ ಅಲೆ ಉತ್ತುಂಗ ಸ್ಥಿತಿಗೆ – ತಜ್ಞ ವೈದ್ಯರ ಸಮಿತಿ

ನವದೆಹಲಿ: ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಕೋವಿಡ್-19 3ನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸದಿದ್ದಲ್ಲಿ ಅಕ್ಟೋಬರ್-ನವೆಂಬರ್ ನಡುವೆ ಮೂರನೇ ಅಲೆ ವೇಳೆ ಸೋಂಕು ಪ್ರಮಾಣ ಉತ್ತುಂಗಕ್ಕೇರಬಹುದು. SARS-CoV-2 ವೈರಸ್ ನ ಯಾವುದೇ ಹೊಸ ವೈರಸ್ ರೂಪಾಂತರವು ಹೊರಹೊಮ್ಮಿದರೆ ಕೋವಿಡ್ ಸೋಂಕು ಮೂರನೇ ಅಲೆಯಲ್ಲಿ ವೇಗವಾಗಿ  ಹರಡುತ್ತದೆ ಎಂದು ಕೋವಿಡ್ ವಿಭಾಗದ ಸರ್ಕಾರಿ ಸಮಿತಿಯ ವಿಜ್ಞಾನಿಗಳು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಮನೀಂದ್ರ ಅಗರ್ವಾಲ್ ಅವರು, ಈಗಿನಿಂದಲೇ ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಮತ್ತು ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡದಿದ್ದರೆ, ಖಂಡಿತಾ ಮೂರನೇ ಅಲೆ ಉಲ್ಬಣವಾಗುತ್ತದೆ. ಅಕ್ಟೋಬರ್-ನವೆಂಬರ್ ನಡುವೆ ಮೂರನೇ ಅಲೆ ವೇಳೆ ಸೋಂಕು  ಪ್ರಮಾಣ ಉತ್ತುಂಗಕ್ಕೇರುವ ಸಾಧ್ಯತೆ ಇದ್ದು. ಈ ಹಂತದಲ್ಲಿ ವೈರಸ್ ನ ರೂಪಾಂತರ ಸೋಂಕು ಹಬ್ಬಿದರೆ ಖಂಡಿತಾ ಸೋಂಕು ಪ್ರಸರಣ ವೇಗವಾಗಿ ಹರಡುತ್ತದೆ. ಈ ಹಂತದಲ್ಲಿ ದೇಶದಲ್ಲಿನ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ 1,50,000 ರಿಂದ 2,00,000 ರ ನಡುವೆ ಏರಿಕೆಯಾಗುವ ಸಾಧ್ಯತೆ. ಇದು  2ನೇ ಅಲೆಯ ದೈನಂದಿನ ಪ್ರಕರಣಗಳಿಗಿಂತ ಶೇ.50ರಷ್ಟು ಕಡಿಮೆ ಇದೆ ಎಂದು ಹೇಳಿದ್ದಾರೆ.

ಮೇ 7 ರಂದು ಭಾರತದಲ್ಲಿ 4,14,188 ಕೋವಿಡ್-19 ಪ್ರಕರಣಗಳು ದಾಖಲಾಗಿತ್ತು. ಇದು ಎರಡನೇ ಅಲೆಯಲ್ಲಿ ಗರಿಷ್ಟ ಪ್ರಮಾಣದ್ದಾಗಿತ್ತು. ಹೊಸ ರೂಪಾಂತರಿತ ವೈರಸ್ ಹೊರಹೊಮ್ಮಿದರೆ, ಮೂರನೆಯ ಅಲೆಯ ಸೋಂಕು ಪ್ರಸರಣ ವೇಗವಾಗಿ ಹರಡಬಹುದು, ಆದರೆ ಅದು ಎರಡನೇ ತರಂಗಕ್ಕಿಂತ ಅರ್ಧದಷ್ಟು  ಇರುತ್ತದೆ. ಡೆಲ್ಟಾ ರೂಪಾಂತರವು ಈ ಮೊದಲು ಬೇರೆ ರೂಪಾಂತರವನ್ನು ಸಂಕುಚಿತಗೊಳಿಸಿದ ಜನರಿಗೆ ಸೋಂಕು ತಗಲುತ್ತಿದೆ. ಆದ್ದರಿಂದ ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅಗರ್ವಾಲ್ ಹೇಳಿದರು.

ಸಂಭಾವ್ಯ ಕೋವಿಡ್ 3ನೇ ಅಲೆಯ ಕುರಿತು ಮಾಹಿತಿ ಸಂಗ್ರಹಿಸಲು ತಜ್ಞರು ಗಣಿತದ ಮಾದರಿಗಳನ್ನು ಬಳಸಿಕೊಂಡು ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ದತ್ತಾಂಶವನ್ನು ಸಿದ್ಧಪಡಿಸಿದ್ದು, ಈ ತಂಡದಲ್ಲಿ ಐಐಟಿ-ಕಾನ್ಪುರದ ವಿಜ್ಞಾನಿ ಆಗರ್ವಾಲ್ ಅವರಲ್ಲದೆ, ಐಐಟಿ-ಹೈದರಾಬಾದ್‌ನ ಮತ್ತೊಬ್ಬ  ವಿಜ್ಞಾನಿ ಎಂ ವಿದ್ಯಾಸಾಗರ್ ಮತ್ತು ಸಮಗ್ರ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥ (ವೈದ್ಯಕೀಯ) ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಅವರೂ ಈ ತಂಡದ ಸದಸ್ಯರಾಗಿದ್ದಾರೆ.

ಈ ಹಿಂದೆ ಕೋವಿಡ್ 2ನೇ ಅಲೆಯ ವಿಚಾರದಲ್ಲಿ ಇದೇ ತಂಡ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಎರಡನೇ ಅಲೆಯ ಉಗ್ರ ಸ್ವರೂಪವನ್ನುಸರಿಯಾಗಿ ಊಹಿಸದಿದ್ದಕ್ಕಾಗಿ ಈ ಸಮಿತಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

ವೈರಸ್ ರೂಪಾಂತರವಾದರ ಅಪಾಯ ಹೆಚ್ಚು
ಇನ್ನು ಸಂಭಾವ್ಯ ಮೂರನೇ ಅಲೆ ನಿಶ್ಚಿತ ಎಂದು ಈಗಾಗಲೇ ದೆಹಲಿ ಏಮ್ಸ್ ಮುಖ್ಯಸ್ಥ ಗುಲೇರಿಯಾ ಸ್ಪಷ್ಟಪಡಿಸಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಈ ಸಮಿತಿಯ ಸದಸ್ಯರಾದ ಅಗರ್ವಾಲ್ ಅವರು, 3ನೇ ಅಲೆಯ ಭೀಕರತೆ ಲಸಿಕೆ ಪಡೆಯುವಿಕೆ, ಕೋವಿಡ್ ನಿಯಮಗಳ ಪಾಲನೆ ಮತ್ತು ರೂಪಾಂತರ ಮೇಲೆ  ನಿಂತಿದೆ. ಜನರು ಶೀಘ್ರ ಕೋವಿಡ್ ಲಸಿಕೆ ಪಡೆದು ಸೂಕ್ತ ರೀತಿಯಲ್ಲಿ ಕೋವಿಡ್ ನಿಯಮ ಪಾಲಿಸಬೇಕು. ಈ ಹಂತದಲ್ಲಿ ರೋಗನಿರೋಧಕ ಶಕ್ತಿ ನಷ್ಟವಾಗುವ ಅಪಾಯವಿರುತ್ತದೆ. ಈ ಕುರಿತ ವಿವರವಾದ ವರದಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಆಗಸ್ಟ್ ವೇಳೆಗೆ ಸಹಜ ಸ್ಥಿತಿಯತ್ತ ಜನಜೀವನ
ಇದೇ ವೇಳೆ ಆಗಸ್ಚ್ ವೇಳೆಗೆ ದೇಶದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುವ ಸಾಧ್ಯಚೆ ಇದೆ ಎಂದು ಹೇಳಿರುವ ತಜ್ಞರ ತಂಡ, ಲಸಿಕಾ ಕಾರ್ಯಕ್ರಮ ಮುಂದುವರೆದಿದ್ದು, ಜನ ಆದಷ್ಟು ಬೇಗ ಲಸಿಕೆ ಪಡೆಯಬೇಕು.  

2ನೇ ಅಲೆಯಷ್ಟು ಆಸ್ಪತ್ರೆ ದಾಖಲಾತಿ ತೀವ್ರವಾಗಿ ಇರುವುದಿಲ್ಲ
ಇನ್ನು ಮೂರನೇ ಅಲೆಯ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆ ಇರಲಿದೆ ಎಂದು ಮತ್ತೊಬ್ಬ ಸಮಿತಿ ಸದಸ್ಯ ಎಂ ವಿದ್ಯಾಸಾಗರ್ ಹೇಳಿದ್ದು, 3ನೇ ಅಲೆ ವೇಳೆ 2ನೇ ಅಲೆಯಷ್ಟು ಆಸ್ಪತ್ರೆ ದಾಖಲಾತಿ ತೀವ್ರವಾಗಿ ಇರುವುದಿಲ್ಲ ಹೇಳಿದ ಅವರು, ಇದಕ್ಕೆ ಬ್ರಿಟನ್ ಉದಹಾರಣೆ  ನೀಡಿದರು. ಬ್ರಿಟನ್ ನಲ್ಲಿ 3ನೇ ಅಲೆ ವೇಳೆ ಜನವರಿಯಲ್ಲಿ 60,000 ಕ್ಕೂ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾಗಿ, ದೈನಂದಿನ ಸಾವು 1,200ರಷ್ಟಿತ್ತು. ನಾಲ್ಕನೇ ಅಲೆ ವೇಳೆ ಈ ಸಂಖ್ಯೆ 21,000 ಪ್ರಕರಣಗಳಿಗೆ ಇಳಿಯಿತು ಮತ್ತು ಕೇವಲ 14 ಸಾವುಗಳು ಸಂಭವಿಸಿತ್ತು ಎಂದು ಹೇಳಿದರು. ಬ್ರಿಟನ್ ನಲ್ಲಿ ಆಸ್ಪತ್ರೆಗೆ  ದಾಖಲು ಅಗತ್ಯವಿರುವ ಸೋಂಕು ಪ್ರಕರಣಗಳನ್ನು ತಗ್ಗಿಸುವಲ್ಲಿ ವ್ಯಾಕ್ಸಿನೇಷನ್ ಪ್ರಮುಖ ಪಾತ್ರ ವಹಿಸಿದೆ ಎಂದು ವಿದ್ಯಾಸಾಗರ್ ಸುದ್ದಿ ಸಂಸ್ಥೆಗೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!