ಡೆಲ್ಟಾ ಪ್ಲಸ್ ಭೀತಿ- ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ
ಮಂಗಳೂರು: ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವರದಿಯಾಗಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಅಲ್ಲದೇ, ಕೇರಳದಿಂದ ವಿಮಾನ, ಬಸ್, ರೈಲು, ಟ್ಯಾಕ್ಸಿ ಮತ್ತಿತರ ವಾಹನಗಳಲ್ಲಿ ಬರುವ ಪ್ರಯಾಣಿಕರಿಗೆ 72 ಗಂಟೆಗಿಂತ ಮೊದಲು ಮಾಡಲಾದ ಆರ್ ಟಿ- ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯ ಪಡಿಸಲಾಗಿದೆ.
ಕೇರಳದ ಕೆಲವು ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಾಣು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆ ಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಕೇರಳದಿಂದ ಬರುವ ವ್ಯಕ್ತಿಗಳ ಮೇಲೆ ಕೂಡಲೇ ಜಾರಿಗೆ ಬರುವಂತೆ ವಿಶೇಷ ನಿಗಾ ವಹಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.
72 ಗಂಟೆಗೂ ಮುಂಚಿತವಾಗಿ ಮಾಡಿಸಲಾದ ಆರ್ ಟಿ- ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವಂತಹ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ರೈಲುಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್ ಟಿ- ಪಿಸಿಆರ್ ನೆಗೆಟಿವ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ರೈಲ್ವೆ ಅಧಿಕಾರಿಗಳಿಗೆ ಇರುತ್ತದೆ.
ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆಗಾಗಿ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ. ಶಿಕ್ಷಣ, ವ್ಯವಹಾರ ಮತ್ತಿತರ ಕಾರಣಗಳಿಂದಾಗಿ ಜಿಲ್ಲೆಗೆ ದಿನನಿತ್ಯ ಭೇಟಿ ನೀಡುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆರ್ ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ತೋರಿಸುವುದು ಕಡ್ಡಾಯವಾಗಿದೆ.
ಎರಡು ಡೋಸ್ ಕೋವಿಡ್-19 ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರುವವರು, ಆರೋಗ್ಯ ಕಾರ್ಯಕರ್ತರು ಮತ್ತು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೆಗೆಟಿವ್ ವರದಿ ತೋರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಸಾವು ಸಂಭವಿಸಿರುವ ಕುಟುಂಬ, ವೈದ್ಯಕೀಯ ಚಿಕಿತ್ಸೆ ಮತ್ತಿತ್ತರ ತುರ್ತು ಸಂದರ್ಭಗಳಲ್ಲಿಯೂ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಿಲ್ಲ.
ದೂರವಾಣಿ ಸಂಖ್ಯೆ, ವಿಳಾಸ ಮುಂತಾದ ಅಗತ್ಯ ವಿವರಗಳೊಂದಿಗೆ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಸ್ವ್ಯಾಬ್ ಸಂಗ್ರಹಿಸಲಾಗು ತ್ತದೆ. ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಸ್ವೀಕರಿಸಿದ ನಂತರ, ರಾಜ್ಯ ಪ್ರೋಟೋಕಾಲ್ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗು ವುದು. ನಿಯಮ ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020, ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.