ಉಡುಪಿ: ಸಾರಿಗೆ ಆಯುಕ್ತರ ಆದೇಶ ಉಲ್ಲಂಘಿಸಿ ರಸ್ತೆಗೆ ಇಳಿದ ಖಾಸಗಿ ಬಸ್ ಮುಟ್ಟುಗೋಲು
ಉಡುಪಿ ಜೂ.29(ಉಡುಪಿ ಟೈಮ್ಸ್ ವರದಿ): ಸಾರಿಗೆ ಆಯುಕ್ತರ ಆದೇಶದ ಹೊರತಾಗಿಯೂ ವಾಹನ ತೆರಿಗೆ ಪಾವತಿಸದೆ ಸಾರ್ವಜನಿಕ ಸೇವೆಗೆ ರಸ್ತೆಗಿಳಿದ ಖಾಸಗಿ ಬಸ್ ವೊಂದನ್ನು ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿದ್ದಾರೆ.
ವಾಹನವನ್ನು ವಶಕ್ಕೆ ಪಡೆಯುವ ವೇಳೆ ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ ಕಚೇರಿಯ ಆವರಣದಲ್ಲಿ ನಿಲ್ಲಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಅನಾವಶ್ಯಕವಾಗಿ ಈ ರೀತಿಯ ತೊಂದರೆಗಳನ್ನು ಸಾರ್ವಜನಿಕರಿಗೆ ನೀಡದೆ, ಮುಂಗಡ ತೆರಿಗೆ ಪಾವತಿಸಿ, ಅದ್ಯಾರ್ಪಣ ನಂತರ ಮಾತ್ರ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸಬೇಕಾಗಿ ಉಡುಪಿಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ
ಸಾರಿಗೆ ಆಯುಕ್ತರ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಜಿಲ್ಲೆಯ ಎಲ್ಲಾ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳು ಮುಂಗಡ ತೆರಿಗೆ ಪಾವತಿಸಿ, ಅದ್ಯಾರ್ಪಣೆ / ಅನುಪಯುಕ್ತತೆಯಿಂದ ಬಿಡುಗಡೆಗೋಳಿಸಿಕೊಂಡು ವಾಹನವನ್ನು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಜೂ.28 ರಂದು ಆದೇಶ ನೀಡಿದ್ದರು.
ಆದರೆ ಅದೇ ದಿನ ಸಂಜೆ ವೇಳೆಗೆ ಖಾಸಗಿ ಬಸ್ ವೊಂದು ಈ ಆದೇಶ ಉಲ್ಲಂಘಿಸಿ ಉಡುಪಿಯಿಂದ ಹೆಬ್ರಿ ಕಡೆಗೆ ಖಾಸಗಿ ಕಂಪನಿಯ ನೌಕರರಿಗೆ ಸಾರ್ವಜನಿಕ ಸೇವೆ ನೀಡಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿ, ವಾಹನವನ್ನು ಮುಟ್ಟುಗೋಲು ಹಾಕಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.