ಮೂಡುಬಿದಿರೆ: ಸೀಫುಡ್ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ಬಂದ ಜನಪ್ರತಿನಿಧಿಗಳಿಗೆ ಮುತ್ತಿಗೆ
ಮೂಡುಬಿದಿರೆ ಜೂ.29(ಉಡುಪಿ ಟೈಮ್ಸ್ ವರದಿ): ನಿಡ್ಡೋಡಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೀಫುಡ್ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ಬಂದಿದ್ದ ಜನಪ್ರತಿನಿಧಿಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ನಡೆದಿದೆ.
ಇಲ್ಲಿನ ಕಲ್ಲಮುಂಡ್ಕೂರು ಗ್ರಾಪಂ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಕೊಳತ್ತಾರು ಪದವು ಸರಕಾರಿ ಜಾಗದಲ್ಲಿ ಸರಕಾರದ ಬೃಹತ್ ಸೀಫುಡ್ ಕಾರ್ಖಾನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಗೆ ನಿನ್ನೆ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಹಾಗೂ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಬಂದಿದ್ದರು.
ಈ ವೇಳೆ ಕಾರ್ಖಾನೆ ಸ್ಥಾಪನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಈ ಕೈಗಾರಿಕೆ ಸ್ಥಾಪನೆಯ ಸಾಧಕ ಬಾಧಕಗಳ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡದೆ, ನಮ್ಮ ಅಭಿಪ್ರಾಯವನ್ನು ಪಡೆಯದೆ, ಸ್ಥಳ ಪರಿಶಿಲನೆಗೆ ಹೇಗೆ ಬಂದಿದ್ದೀರಿ ಎಂದು ಸ್ಥಳೀಯರು ಸಚಿವ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ರಾಮಸ್ಥರ ಮನವೊಲಿಸುವ ಸಲುವಾಗಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಇದು ರಾಜ್ಯ ಸರಕಾರದ ಬೃಹತ್ ಕೈಗಾರಿಕೆ ಯಾಗಿದ್ದು, ಇದನ್ನು ತನ್ನ ಕ್ಷೇತ್ರದಲ್ಲಿ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ಇದು ಸುಮಾರು 50 ಎಕರೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿದೆ.
ಇದಕ್ಕೆ ಖಾಸಗಿ ಜಾಗ ಅತಿಕ್ರಮಣವಾಗುವುದಿಲ್ಲ ಹಾಗೂ ಸ್ಥಳೀಯರಿಗೆ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕೂಡ ಲಭಿಸಲಿದೆ ಎಂದು ಹೇಳಿದರೂ ಸಮಾಧಾನಗೊಳ್ಳದ ಗ್ರಾಮಸ್ಥರು,ಈ ಬಗ್ಗೆ ಲಿಖಿತ ಭರವಸೆ ನೀಡ ಬೇಕೆಂದು ಪಟ್ಟು ಹಿಡಿದರು. ಈ ವೇಳೆ ಲಿಖಿತ ಬರವಸೆ ನೀಡಲು ಶಾಸಕರು ನಿರಾಕರಿಸಿದರು. ಬಳಿಕ ಯೋಜನೆಯ ಬಗ್ಗೆ ತಮಗೆ ಲಿಖಿತ ಮಾಹಿತಿ ನೀಡುವಂತೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಿ ಬಳಿಕ ಶಾಸಕರು ಮತ್ತು ಸಚಿವರು ಅಲ್ಲಿಂದ ತೆರಳಿದರು. ಈ ಪ್ರತಿಭಟನೆಯಲ್ಲಿ ಕೊಳತ್ತಾರು ಪದವು ಪರಿಸರದ ಸುಮಾರು 250ಕ್ಕೂ ಮಿಕ್ಕಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.