ಜುಲೈನಲ್ಲಿ ರಾಜ್ಯಕ್ಕೆ ಒಟ್ಟು 60 ಲಕ್ಷ ಡೋಸ್ ಲಸಿಕೆ ಹಂಚಿಕೆ- ಅಭಿಯಾನ ವೇಗಕ್ಕೆ ಬ್ರೇಕ್?
ನವದೆಹಲಿ: ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 60 ಲಕ್ಷ ಡೋಸ್ ಕೋವಿಡ್–19 ಲಸಿಕೆ ಹಂಚಿಕೆ ಮಾಡಲಿದೆ. ಇದರಿಂದಾಗಿ ನಿತ್ಯ 2 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಲಿದ್ದು, ಕರ್ನಾಟಕ ಸರ್ಕಾರ ಆರಂಭಿಸಿರುವ ಅಭಿಯಾನವು ವೇಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಶನಿವಾರ ಸಂಜೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹೇಳಿಕೆಯ ಪ್ರಕಾರ, ಜುಲೈನಲ್ಲಿ ಖಾಸಗಿಯವರಿಗೆ ವಿತರಿಸುವುದೂ ಒಳಗೊಂಡಂತೆ ರಾಷ್ಟ್ರದಾದ್ಯಂತ 12 ಕೋಟಿ ಡೋಸ್ ಲಸಿಕೆ ಮಾತ್ರ ಲಭ್ಯವಾಗಲಿದೆ.
ಕರ್ನಾಟಕವು ಈ ಅವಧಿಯಲ್ಲಿ ಒಟ್ಟು 59,98,450 ಡೋಸ್ ಲಸಿಕೆ ಪಡೆಯಲಿದೆ. ಆ ಪೈಕಿ 49,77,830 ಕೋವಿಶೀಲ್ಡ್ ಲಸಿಕೆ, 10,20,630 ಡೋಸ್ ಕೋವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ. ಅದರಲ್ಲಿ ಖಾಸಗಿಯವರಿಗೆ 12,44,460 ಕೋವಿಶೀಲ್ಡ್, 2,55,160 ಡೋಸ್ ಕೋವ್ಯಾಕ್ಸಿನ್ ದೊರೆಯಲಿದೆ.
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ (1.91 ಕೋಟಿ) ಹಾಗೂ ಮಹಾರಾಷ್ಟ್ರ (1.51 ಕೋಟಿ) ಮಾತ್ರ ಮುಂದಿನ ತಿಂಗಳು 1 ಕೋಟಿಗೂ ಅಧಿಕ ಡೋಸ್ ಲಸಿಕೆ ಪಡೆಯುವ ರಾಜ್ಯಗಳಾಗಿವೆ. ಲಸಿಕೆ ಲಭ್ಯತೆಯ ಮಾಹಿತಿಯನ್ನು ಆಯಾ ತಿಂಗಳು ಮುಂಚಿತವಾಗಿಯೇ ಆಯಾ ರಾಜ್ಯಗಳಿಗೆ ನೀಡುವುದಾಗಿ ತಿಳಿಸಿದ್ದ ಕೇಂದ್ರವು, ಅದರ ಅನ್ವಯ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಈ ವಿವರಣೆ ನೀಡಿದೆ.
ನಿತ್ಯವೂ ರಾಷ್ಟ್ರದಾದ್ಯಂತ 1 ಕೋಟಿ ಡೋಸ್ ಲಸಿಕೆ ಒದಗಿಸುವುದಾಗಿ ಭರವಸೆ ನೀಡಿದ್ದರೂ, ಕಳೆದ ವಾರದವರೆಗೆ ಸರಾಸರಿ 64 ಲಕ್ಷ ಡೋಸ್ ಒದಗಿಸಿದ್ದ ಕೇಂದ್ರ, ಮುಂದಿನ ತಿಂಗಳಿನ ಹಂಚಿಕೆಯ ಪ್ರಕಾರ ಪ್ರತಿ ದಿನ ಸರಾಸರಿ 38 ಲಕ್ಷ ಡೋಸ್ ಲಸಿಕೆ ಒದಗಿಸಲಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಒದಗಿಸಿರುವ ಮಾಹಿತಿ ಪ್ರಕಾರ ಜೂನ್ 21ರಿಂದ 27ರವರೆಗೆ 26 ಲಕ್ಷ ಡೋಸ್ ನೀಡಲಾಗಿದೆ. ಇದೇ ಅವಧಿಯಲ್ಲಿ ಕೇರಳದಲ್ಲಿ 36.50 ಲಕ್ಷ, ಆಂಧ್ರಪ್ರದೇಶದಲ್ಲಿ 70.86 ಲಕ್ಷ, ತೆಲಂಗಾಣದಲ್ಲಿ 27.99 ಲಕ್ಷ, ತಮಿಳುನಾಡಿನಲ್ಲಿ 71.01 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. 18 ವರ್ಷ ಮೀರಿದ ವಯೋಮಾನದ ಜನಸಂಖ್ಯೆ ಆಧಾರದಲ್ಲಿ ಆಯಾ ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡುತ್ತಿರುವುದಾಗಿ ಕೇಂದ್ರವು ಹೇಳಿದೆ.
ಕೋವಿಡ್ ದೃಢ ಪ್ರಮಾಣ ಶೇ 1.92ಕ್ಕೆ ಇಳಿಕೆ: ರಾಜ್ಯದಲ್ಲಿ ಕೋವಿಡ್ ದೃಢ ಪ್ರಮಾಣ ಶೇ 1.92ಕ್ಕೆ ಇಳಿದಿದೆ. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ನಂತರ ವರದಿಯಾದ ಅತೀ ಕಡಿಮೆ ಪ್ರಮಾಣ ಇದಾಗಿದೆ.
ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಹೊಸದಾಗಿ 2,576 ಮಂದಿಗೆ ಸೋಂಕು ತಗುಲಿರುವುದು ಖಾತರಿ ಯಾಗಿದೆ. ಹಿಂದಿನ 24 ಗಂಟೆಗಳಲ್ಲಿ 93 ಮಂದಿ ಸಾವಿಗೀಡಾಗಿದ್ದು, ಮರಣ ಪ್ರಮಾಣ ದರ ಶೇ 3.61ರಷ್ಟಿದೆ. ಒಂದೇ ದಿನ 1.33 ಲಕ್ಷ ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಸೋಮವಾರ 5,933 ಮಂದಿಯಲ್ಲಿ ಕಾಯಿಲೆ ವಾಸಿಯಾಗಿದೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 97,592ಕ್ಕೆ ತಗ್ಗಿದೆ. ಈವರೆಗೆ 27.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಕ್ಷೀಣಿಸಿದೆ. ಬೆಂಗಳೂರಿನಲ್ಲಿ ಮತ್ತೆ 563 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.