ಉಡುಪಿ: 96 ಮಂದಿಯಲ್ಲಿ ಪಾಸಿಟಿವ್-ಕಾರ್ಕಳದ ಓರ್ವ ಮಹಿಳೆ ಮೃತ್ಯು
ಉಡುಪಿ ಜೂ.27(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆ ಯಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕೂಡಾ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಇಂದು 96 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಈ ಪೈಕಿ ಉಡುಪಿ 43, ಕುಂದಾಪುರ 37, ಕಾರ್ಕಳ 16 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 1010 ಕ್ಕೆ ಇಳಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಕಾರ್ಕಳ ದ 66 ವರ್ಷದ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜೂ. 26 ರಂದು ಜಿಲ್ಲೆಯಲ್ಲಿ 214 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಿದ್ದು, ಕೋವಿಡ್ 2ನೇ ಅಲೆ ಆರಂಭ ಆದಾಗಿನಿಂದ ಈವರೆಗೆ 41,315 ಮಂದಿ ಗುಣಮುಖರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಒಟ್ಟು ಈವರೆಗೆ ಪತ್ತೆಯಾದ 66,136 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ 64,736ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ 2 ನೇ ಅಲೆಯಲ್ಲಿ ಜೂ.26 ರ ವೇಳೆಗೆ ಜಿಲ್ಲೆಯಲ್ಲಿ 3,08,328 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 42,525 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವರೆಗೆ 2 ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 200 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ 4 ಬ್ಲಾಕ್ ಫಂಗಸ್ ಪ್ರಕರಣಗಳು ಸಕ್ರಿಯವಾಗಿದೆ. ಈ ವರೆಗೆ ಉಡುಪಿಯಲ್ಲಿ 4, ಕುಂದಾಪುರದಲ್ಲಿ 6 ಹಾಗೂ ಹೊರ ಜಿಲ್ಲೆಯ 19 ಮಂದಿಯಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 23 ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಇಬ್ಬರು ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ಒಟ್ಟು 29 ಬ್ಲಾಕ್ ಫಂಗಸ್ ನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ.