ಕನಿಷ್ಠ ಬೀಜ, ಗೊಬ್ಬರ ನೀಡಲಾಗದ ಸರ್ಕಾರ ರೈತರ ಉದ್ದಾರಕ್ಕೆ ಇನ್ಯಾವ ಸಾಧನೆ ಮಾಡಬಲ್ಲದು?- ಕಾಂಗ್ರೆಸ್
ಬೆಂಗಳೂರು: ರೈತರೆದುರು ಸಮಸ್ಯೆಗಳನ್ನಿಟ್ಟು ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ, ಪಾಂಡವರಂತೆ ಬಿಕ್ಕಟ್ಟುಗಳನ್ನ ಬಗೆಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿವಿದಿದೆ.
ಈ ಸಂಬಂಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ರಾಜ್ಯ ಕಾಂಗ್ರೆಸ್ ಬಿತ್ತನೆ ಬೀಜ, ಗೊಬ್ಬರ ಸಿಗದೆ ರೈತರು ಪರದಾಡುತ್ತಿರುವ ಸಮಯದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ ಎಂದು ಪ್ರಶ್ನಿಸಿದೆ.
ಅಯೋಗ್ಯತನ ಯಾರದ್ದು ಎನ್ನುವುದನ್ನ ರಾಜ್ಯ ಕಂಡಿದೆ ಸಚಿವರೇ,ಬಿತ್ತನೆ ಬೀಜ ಸಿಗದಿರುವುದೇಕೆ? ಡಿವಿ ಸದಾನಂದಗೌಡ ಅವರು ರಾಜ್ಯದವರಾಗಿದ್ದರೂ ರೈತರಿಗೆ ರಸಗೊಬ್ಬರ ಏಕೆ ಸಿಗ್ತಿಲ್ಲ? ಬೆಳೆ ವಿಮೆ ಹಣ ಏಕೆ ಸಿಗ್ತಿಲ್ಲ? ‘ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ ‘ಇಲ್ಲ’ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಗೊಬ್ಬರ, ಬಿತ್ತನೆ ಬೀಜ ಎಂದು ಆರೋಪಿಸಿದೆ.
ಬಿಎಸ್ ಯಡಿಯೂರಪ್ಪ ಅವರೇ, ರೈತರನ್ನ ಮೆಚ್ಚಿಸಲು ಹಸಿರು ಶಾಲಿನ ಪ್ರಮಾಣ ವಚನದ ನಾಟಕವಾಡಿದ ನೀವು ಈಗ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ. ಕಳೆದ ಬಾರಿ ಗೊಬ್ಬರ ಕೇಳಿದ ರೈತರಿಗೆ ಗುಂಡೇಟು, ಈ ಬಾರಿ ಬಿತ್ತನೆ ಬೀಜ ಕೇಳಿದವರಿಗೆ ಲಾಠಿ ಏಟು. ಕನಿಷ್ಠ ಬೀಜ, ಗೊಬ್ಬರ ನೀಡಲಾಗದ ಬಿಜೆಪಿ ಸರ್ಕಾರ ರೈತರ ಉದ್ದಾರಕ್ಕೆ ಇನ್ಯಾವ ಸಾಧನೆ ಮಾಡಬಲ್ಲದು? ಟೀಕಿಸಿದೆ.