ದೆಹಲಿಗೆ ಬಿ.ವೈ ವಿಜಯೇಂದ್ರ ಪ್ರಯಾಣ- ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ
ಬೆಂಗಳೂರು: ಬಿಜೆಪಿ ಒಳ ರಾಜಕೀಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿದ್ದಾರೆ.
ಬಿವೈ ವಿಜಯೇಂದ್ರ ದೆಹಲಿ ಪ್ರಯಾಣ ಹಲವು ಹೊಸ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಾಸಕರು ಮತ್ತು ಸಚಿವರುಗಳ ಜೊತೆ ಹಲವು ಸಭೆ ನಡೆಸಿದ್ದರು. ಈ ವೇಳೆ ಅಸಮಾಧಾನಿತ ಶಾಸಕರು ತಮ್ಮ ನೋವನ್ನು ಕೇಂದ್ರ ನಾಯಕರಿಗೆ ರವಾನಿಸಿದ್ದರು, ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸಚಿವ ಸಿಪಿ ಯೋಗೇಶ್ವರ ಶಾಸಕ ಅರವಿಂದ ಬೆಲ್ಲದ್ ಅವರ ಜೊತೆ ದೆಹಲಿಗೆ ತೆರಳಿದ ನಂತರ ಬಿಜೆಪಿಯಲ್ಲಿ ಸಮಸ್ಯೆಎದುರಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ ಪಡೆದಿದ್ದಾರೆಂದು ಎಂಎಲ್ ಸಿ ಎಚ್.ವಿಶ್ವನಾಥ ಆರೋಪಿಸಿದ್ದರು, ಅದಕ್ಕೂ ಮೊದಲು ಹಲವು ಭ್ರಷ್ಚಾಚಾರದ ದೂರುಗಳು ಕೇಳಿ ಬಂದಿದ್ದವು.
ಜೂನ್ 17 ರ ಬೆಳಿಗ್ಗೆ ಅರುಣ್ ಸಿಂಗ್ ಅವರ ಕೋ-ಇನ್ಚಾರ್ಜ್ ಡಿ ಕೆ ಅರುಣಾ ಅವರನ್ನು ಕೋಣೆಯಿಂದ ಹೊರಹೋಗುವಂತೆ ಕೋರಿ, ಭ್ರಷ್ಟಾಚಾರ ಮತ್ತು ಕುಟುಂಬದ ಹಸ್ತಕ್ಷೇಪದ ಬಗ್ಗೆ ತಮ್ಮ ದೂರನ್ನು ಬರೆದು ಅರುಣ್ ಸಿಂಗ್ ಅವರಿಗೆ ನೀಡಿದ್ದಾಗಿ ಎಂಎಲ್ ಸಿ ವಿಶ್ವನಾಥ್ ತಿಳಿಸಿದ್ದಾರೆ.
ಈ ಹಿಂದೆ ಜೆಎಸ್ ಡಬ್ಲ್ಯೂ ಗ್ರೂಪ್ ಗೆ ಭೂಮಿ ಮಾರಾಟ ಮಾಡಿದ್ದರ ಸಂಬಂಧ ಶಾಸಕ ಅರವಿಂದ್ ಬೆಲ್ಲದ್ ಕೇಂದ್ರ ನಾಯಕರಿಗೆ ದೂರು ನೀಡಿದ್ದರು. ಅದಾದ ನಂತರ ಕೇಂದ್ರ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ 3,667 ಎಕರೆ ಭೂಮಿ ಮಾರಾಟ ಮಾಡದಂತೆ ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದ್ದರು. ಬೆಲ್ಲದ್ ದೂರಿನ ನಂತರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಭೂಮಿ ನೀಡದಂತೆ ನಿರ್ಧಾರ ಕೈಗೊಂಡಿತ್ತು.
ಫೋನ್ ಟ್ಯಾಪಿಂಗ್ ಬಗ್ಗೆ ದೂರು ಕೂಡ ಬಂದಿದ್ದು, ಬಿಜೆಪಿ ಭಿನ್ನಮತೀಯರು ತಮ್ಮ ಫೋನ್ಗಳನ್ನು ಟ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಧ್ಯವಾದಾಗಲೆಲ್ಲಾ ಲ್ಯಾಂಡ್ಲೈನ್ ಬಳಸಲು ಆದ್ಯತೆ ನೀಡುತ್ತೇನೆ ಎಂದು ಬಿಜೆಪಿ ಭಿನ್ನಮತೀಯ ನಾಯಕರೊಬ್ಬರು ಹೇಳಿದ್ದಾರೆ.