ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಿದ್ದರಾಮಯ್ಯ ಹಣ ಪಡೆದಿದ್ದಾರೆ-ಕುಮಾರಸ್ವಾಮಿ ಆರೋಪ
ಮಾಲೂರು, ಜೂ.19: ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹಣ ಪಡೆದಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.ಮಾಲೂರಿನಲ್ಲಿ ನಡೆದ ಕೊರೋನಾ ಯೋಧರಿಗೆ ದಿನಸಿ ಕಿಟ್ ವಿತರಣೆ ಕಾರ್ಯ ಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಹಣ ಪಡೆದಿದ್ದು ಸಿದ್ದರಾಮಯ್ಯ ಹೊರತು ನಾವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಚುನಾವಣೆಗಳಲ್ಲಿ ನಾನು ಯಾರ ಜೊತೆಯೂ ರಾಜಿ ಮಾಡಿಕೊಂಡಿಲ್ಲ ಎಂದ ಅವರು, ಬಿಜೆಪಿ ದುರಾಡಳಿತದಲ್ಲಿ ಕಾಂಗ್ರೆಸ್ ಪಕ್ಷದವರದ್ದೂ ಸಮಪಾಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಶ್ಚಂದ್ರರೇ? ಬೆಂಗಳೂರಿನಲ್ಲಿ 450 ಎಕರೆ ರೀಡೋ ಮಾಡಿ ಕೆಂಪಣ್ಣ ಆಯೋಗ ಜಾರಿಗೆ ತಂದು 400-500 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ 2008ರಲ್ಲಿ ಯಡಿಯೂರಪ್ಪನವರಿಂದಲೇ ಹಣ ಪಡೆದಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಆಪ್ತರೇ ಮಾಹಿತಿ ನೀಡಿದ್ದಾರೆ. ಬಿಜೆಪಿ ಗೆಲ್ಲಿಸಲು ಹಣ ಪಡೆದದ್ದು ಅವರೇ. ಯಾವ ಸಮಯದಲ್ಲಿ ಕತ್ತು ಕೊಯ್ಯಬೇಕು ಎನ್ನುವುದು ಸಿದ್ದರಾಮಯ್ಯ ಅವರ ಜಾಯಮಾನ. ಇಂತವರಿಂದ ನಾನು ಕಲಿಯಬೇಕಾಗಿಲ್ಲ. ನನ್ನ ಬಗ್ಗೆ ಮಾತನಾಡುವ ಮೊದಲು ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.