ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಪ್ರಕರಣ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಜೂ.19: ಲಾಕ್‍ಡೌನ್ ನಿಯಮ ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. 

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದರೆ ಯಾರಿಗೂ ಇಲ್ಲ ಎಂದೇ ಅರ್ಥ. ಅಂತಹದ್ದರಲ್ಲಿ ರಾಜಕಾರಣಿಗಳು ಹೇಗೆ ಭೇಟಿ ನೀಡಲು ಸಾಧ್ಯ. ರಾಜಕಾರಣಿಗಳಿಗೆ ಇತರರಿಗಿಂತ ಹೆಚ್ಚು ಹೊಣೆಗಾರಿಕೆಯಿರುತ್ತದೆ. ಈ ಪ್ರಕರಣ ಸಂಬಂಧಪಟ್ಟ ಎಲ್ಲರ ಕಣ್ತೆರೆಸಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಅರಿವಾಗಬೇಕು . ಹೀಗಾಗಿ ನಿರ್ಬಂಧ ಮೀರಿ ದೇವವಸ್ಥಾನ ಪ್ರವೇಶಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಮುಜರಾಯಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸೂಚನೆ ನೀಡಿದೆ.

ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಬಿ ವೈ ವಿಜಯೇಂದ್ರ ಅವರ ದೇವಸ್ಥಾನ ಭೇಟಿಯನ್ನು ಸಮರ್ಥಿಸಿ ವಾದಿಸಿದ ಅವರು, ನಂಜನಗೂಡು ದೇವಸ್ಥಾನವನ್ನು ವಿಜಯೇಂದ್ರ ಪ್ರವೇಶಿಸಿದ್ದರು ನಿಜ. ವಿಶೇಷ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ವಿಜಯೇಂದ್ರ ಉದ್ದೇಶಪೂರ್ವಕವಾಗಿ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ. ಕೇವಲ ಐದು ಹತ್ತು ನಿಮಿಷವಷ್ಟೇ ದೇವಾಸ್ಥಾನದೊಳಗೆ ಇದ್ದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿರ್ಬಂಧ ಇದ್ದರೂ ಜನ ದೇವಾಲಯಕ್ಕೆ ಹೋಗಬಹುದೇ? ಅರ್ಚಕರದಷ್ಟೇ ಹೊಣೆಯೇ? ಹೋದವರದ್ದು ಇಲ್ಲವೇ? ಹಾಗಿದ್ದರೆ ಜನಸಾಮಾನ್ಯರಿಗೂ ಆ ಅವಕಾಶ ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿತು.

ಕಳೆದ ಎಪ್ರಿಲ್‍ನಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲಾಕ್‍ಡೌನ್ ಜಾರಿ ಮಾಡಿತ್ತು. ಅಗತ್ಯ ವಸ್ತುಗಳ ಖರೀದಿ ಹಾಗೂ ತುರ್ತು ಸೇವೆ ಹೊರತುಪಡಿಸಿ ಬೇರೆಲ್ಲದಕ್ಕೂ ನಿರ್ಬಂಧ ವಿಧಿಸಿತ್ತು. ಈ ಮಧ್ಯೆ ಸಿಎಂ ಪುತ್ರ ವಿಜಯೇಂದ್ರ ತಮ್ಮ ಪತ್ನಿ ಹಾಗೂ ಕುಟುಂಬದೊಂದಿಗೆ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದರು, ವಿಜಯೇಂದ್ರ ಅವರ ಈ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

error: Content is protected !!