| ಬೆಂಗಳೂರು ಜೂ.18: ಕೋವಿಡ್ ಸಂಕಷ್ಟದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತಾಗಿ ಆರ್ ಟಿಐ ಕಾರ್ಯಕರ್ತ ವಿವೇಕ್ ಪಾಂಡೆ ಅವರು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಲ್ಲಿಸಿದ ಅರ್ಜಿಯ ಪ್ರಕಾರ, ಏಪ್ರಿಲ್ 2020 ರಿಂದ ಮೊದಲ 2021 ರವರೆಗೆ 6.05 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಕೋವಿಡ್ ಚಿಕಿತ್ಸೆಯನ್ನು ಪಡೆದಿದ್ದಾರೆ. ಈ ಪೈಕಿ 17.73 ಲಕ್ಷ ಜನರು ಉಚಿತ ಪರೀಕ್ಷೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚು ಫಲಾನುಭವಿಗಳನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 1,62,050 ಜನರು ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್ಗೆ ಚಿಕಿತ್ಸೆ ಪಡೆದಿದ್ದು, ಕೋವಿಡ್ ಚಿಕಿತ್ಸೆ ಪಡೆದ 1,62,050 ಮತ್ತು ಕಳೆದ ಒಂದು ವರ್ಷದಲ್ಲಿ ಕರ್ನಾಟಕವು 770.60 ಕೋಟಿ ರೂ. ಖರ್ಚು ಮಾಡಿದೆ.ಕರ್ನಾಟಕ ನಂತರದ ಸ್ಥಾನಗಳಲ್ಲಿ ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿದ್ದು, ಈ ಪೈಕಿ ಮಹಾರಾಷ್ಟ್ರ 1,61,234 (424.39 ಕೋಟಿ ರೂ), ಪರೀಕ್ಷೆ (1,25,213) ಮತ್ತು ಚಿಕಿತ್ಸೆ (1,61,234) ಹಾಗೂ ಆಂಧ್ರಪ್ರದೇಶದಲ್ಲಿ 1,54,760 ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದು, ಇದಕ್ಕಾಗಿ 413.98 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಇದೇ ವೇಳೆ ಕೋವಿಡ್ ಪರೀಕ್ಷೆಯ ಯೋಜನೆಯಲ್ಲಿ ಕರ್ನಾಟಕ ರಾಜ್ಯದಿಂದ ಯಾವುದೇ ಫಲಾನುಭವಿಗಳು ಹೊಂದಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ನಡೆಸಿದ 17.73 ಲಕ್ಷ ಪರೀಕ್ಷೆಗಳಲ್ಲಿ, ಅತಿ ಹೆಚ್ಚು ತಮಿಳುನಾಡು ರಾಜ್ಯದಿಂದ ಬಂದಿದ್ದು, ಅಲ್ಲಿ 2021 ಜೂನ್ ಮೊದಲ ವಾರದವರೆಗೆ 15.84 ಲಕ್ಷ ಜನರಿಗೆ ಅನುಕೂಲ ವಾಗಿದೆ ಮತ್ತು ಈ ಉದ್ದೇಶಕ್ಕಾಗಿ 315 ಕೋಟಿ ರೂ. ಈ ಯೋಜನೆಯಡಿ ಕೋವಿಡ್ಗೆ ಸುಮಾರು 10,370 ಜನರಿಗೆ ಚಿಕಿತ್ಸೆ ನೀಡಲಾಗಿದೆ.
ದೇಶದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ 1,538 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಕೇವಲ 875 ಜನರು ಮಾತ್ರ ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ 105 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಕೇವಲ 19 ಜನರು ಮಾತ್ರ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಪಂಜಾಬ್, ಗುಜರಾತ್ ಮತ್ತು ದಾಮನ್ನಲ್ಲಿ ಒಬ್ಬ ರೋಗಿಯೂ ಸಹ ಈ ಯೋಜನೆಯ ಪ್ರಯೋಜನ ಪಡೆದಿಲ್ಲ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮಾಹಿತಿ ಪ್ರಕಾರ,ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿಯಲ್ಲಿ 2021ರ ಜೂನ್ ಮೊದಲ ವಾರಾಂತ್ಯಕ್ಕೆ 23.78 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ17.73 ಲಕ್ಷ ಕೇವಲ ಪರೀಕ್ಷೆ ಮಾಡಿಸಿಕೊಂಡರೆ, 6.05 ಲಕ್ಷ ಜನರು ಕೋವಿಡ್ಗೆ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯಡಿ ಪರೀಕ್ಷಿಸಿದ ಜನಸಂಖ್ಯೆ, ಚಿಕಿತ್ಸೆ ಪಡೆದವರ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 17,73,464 ಜನರು ಪರೀಕ್ಷೆ ಮಾಡಿಸಿಕೊಂಡರೆ, 6,05,308 ಜನರು ಯೋಜನೆಯ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ಯೋಜನೆಗೆ ಹಣಕಾಸು ಸಚಿವಾಲಯದಿಂದ 9,481 ಕೋಟಿ ರೂ. ನೆರವು ದೊರೆತಿದ್ದು, ಈ ಪೈಕಿ 8,542.3 ಕೋಟಿ ರೂ. ಬಳಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
2018ರಲ್ಲಿ ಆರಂಭವಾದ ಆಯುಷ್ಮಾನ್ ಭಾರತ್ ಯೋಜನೆ ಸುಮಾರು 50 ಕೋಟಿಗೂ ಅಧಿಕ ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯುವಲ್ಲಿ ಸಹಕಾರಿಯಾಗಿದೆ. ಈ ಯೋಜನೆಯಡಿ ಫಲಾನುಭವಿ ಕುಟುಂಬದ ಸದಸ್ಯರೊಬ್ಬರು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸಾಕಷ್ಟು ಜನರ ಜೀವ ಉಳಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ ಅಂಶವಾಗಿದೆ.
ಇನ್ನು ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ, ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಬಡ ಜನರಿಗೆ ಉಚಿತ ಔಷಧಿಗಳನ್ನು ಒದಗಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಆರ್ಟಿಐ ಸಲ್ಲಿಸಲು ಮುಖ್ಯ ಕಾರಣ ಈ ಯೋಜನೆಯಿಂದ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯುವುದು. ಕೇವಲ ಒಂದು ವರ್ಗದ ಜನರು ಕೆಲವು ರಾಜ್ಯಗಳು ಈ ಯೋಜನೆಯಿಂದ ಲಾಭ ಪಡೆದರೆ, ಇತರೆ ಹಲವು ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ. | |