ಬೀದಿಗೆ ಬಂದ ಬಿಜೆಪಿ ನಾಯಕರ ಜಗಳ: ಅರುಣ್ ಸಿಂಗ್ ಸೂಚನೆ ಧಿಕ್ಕರಿಸಿ ಬಹಿರಂಗ ವಾಗ್ದಾಳಿ
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿರುವ ಭಿನ್ನಮತವನ್ನು ಶಮನ ಮಾಡಲು ಬಂದಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಶಾಸಕರು ಮುಕ್ತವಾಗಿ ತಮ್ಮ ಸಮಸ್ಯೆ, ಅಭಿಪ್ರಾಯಗಳನ್ನು ಹೇಳಿಕೊಳ್ಳಲು ನಿನ್ನೆ ಅವಕಾಶ ನೀಡಲಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸರ್ಕಾರದ ವಿರುದ್ಧ ಶಾಸಕರ ಒಂದು ಬಣಕ್ಕೆ ಇದ್ದ ಅಸಮಾಧಾನ, ಸಿಟ್ಟು ನಿನ್ನೆ ಸ್ಫೋಟಗೊಂಡಿದ್ದು ಸುಳ್ಳಲ್ಲ. ಕೆಲವು ಶಾಸಕರು ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸ್ವಜನ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಶಾಸಕರಾದ ಎಂ ಪಿ ರೇಣುಕಾಚಾರ್ಯ ಮತ್ತು ಎಸ್ ಆರ್ ವಿಶ್ವನಾಥ್ ಪ್ರತಿದಾಳಿ ನಡೆಸಿದರು.
ಯಾರೂ ಕೂಡ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ ಎಂದು ಗುರುವಾರ ಅರುಣ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದರೂ ನಿನ್ನೆ ಮತ್ತೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಶಾಸಕರಾದ ಅರವಿಂದ್ ಬೆಲ್ಲದ್, ಎಸ್ ಆರ್ ವಿಶ್ವನಾಥ್ ಮತ್ತು ಎಂ ಪಿ ರೇಣುಕಾಚಾರ್ಯ ಬಹಿರಂಗವಾಗಿಯೇ ಮಾತಿನ ದಾಳಿ ನಡೆಸಿದರು.
ನಿನ್ನೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅರುಣ್ ಸಿಂಗ್ ಅವರು ಶಾಸಕರು ಮತ್ತು ಪದಾಧಿಕಾರಿಗಳನ್ನು ಕರೆದಿದ್ದರು. ಗೌಪ್ಯವಾಗಿ ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿದ್ದ ಚರ್ಚೆ, ಮಾತುಕತೆ ಎಂಎಲ್ಸಿ ವಿಶ್ವನಾಥ್ ಅವರು ಮಾಧ್ಯಮಗಳ ಮುಂದೆ ವಿವಾದಿತ ಹೇಳಿಕೆ ನೀಡುವ ಮೂಲಕ ಸ್ಫೋಟಗೊಂಡಿತು. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಶಕ್ತಿಯಿಲ್ಲ ಎಂದರು.
ಅವರ ಈ ಮಾತಿಗೆ ರೇಣುಕಾಚಾರ್ಯ ಮತ್ತು ಶಾಸಕ ವಿಶ್ವನಾಥ್ ಕೆರಳಿ ಕೆಂಡವಾದರು. ಅವರು ಕೂಡ ವಿಶ್ವನಾಥ್ ವಿರುದ್ಧ ಸರಣಿ ಆರೋಪಗಳನ್ನು ಮಾಧ್ಯಮಗಳ ಮುಂದೆ ಖುಲ್ಲಾಂ ಖುಲ್ಲ ಆಗಿ ಹೇಳಿಬಿಟ್ಟರು. ಯಡಿಯೂರಪ್ಪನವರ ಕುಟುಂಬದ ಹಸ್ತಕ್ಷೇಪದಿಂ ದಾಗಿ ಯಾವುದೇ ಸಚಿವರು ಅವರ ನೇತೃತ್ವದ ಸರ್ಕಾರದಲ್ಲಿ ಸಂತೋಷವಾಗಿಲ್ಲ. ಅವರ ಮಗ ವಿಜಯೇಂದ್ರ ಪ್ರತಿ ವಿಭಾಗದಲ್ಲೂ ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದಾರೆ, ಅದು ನೀರಾವರಿ ಇಲಾಖೆಯಲ್ಲಿ ಟೆಂಡರ್ ಆಗಿರಲಿ ಅಥವಾ ಉಕ್ಕಿನ ಕಂಪನಿಗೆ ಭೂಮಿಯನ್ನು ಮಾರಾಟ ಮಾಡುವ ವಿಚಾರದಲ್ಲಾಗಿರಲಿ, ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಎಂಎಲ್ಸಿ, ಹಿರಿಯ ನಾಯಕ ವಿಶ್ವನಾಥ್ ಆರೋಪಿಸಿದರು.
2019ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ 17 ಶಾಸಕರಲ್ಲಿ ಹೆಚ್ ವಿಶ್ವನಾಥ್ ಕೂಡ ಒಬ್ಬರು. ಆದರೆ ನಂತರ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನ ದಟ್ಟವಾಯಿತು.
ನಿನ್ನೆ ಶಾಸಕರು, ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ ಹೊರಗೆ ಬಂದ ಅರುಣ್ ಸಿಂಗ್ ಅವರಲ್ಲಿ ಮಾಧ್ಯಮದವರು ವಿಶ್ವನಾಥ್ ಹೇಳಿಕೆ ಬಗ್ಗೆ ಕೇಳಿದಾಗ, ವಿಶ್ವನಾಥ್ ಅವರು ಪಕ್ಷಕ್ಕೆ ಹೊಸಬರು, ಅವರಿಗೆ ನಮ್ಮ ಪಕ್ಷದ ಸಂಸ್ಕೃತಿ ಬಗ್ಗೆ ಇನ್ನೂ ತಿಳಿದಿಲ್ಲ ಎಂದರು.
ದಿನದ ಎಲ್ಲಾ ಅಧಿಕೃತ ಕಾರ್ಯಗಳನ್ನು ನಿನ್ನೆ ರದ್ದುಪಡಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅರುಣ್ ಸಿಂಗ್ ಅವರೊಂದಿಗಿನ ಶಾಸಕರ ಸಂವಾದದ ವೇಳೆ ತಮ್ಮ ನಿವಾಸದಲ್ಲಿಯೇ ಉಳಿದುಕೊಂಡು ರಾಜಕೀಯ ವಿದ್ಯಮಾನಗಳನ್ನು ಗಮನಿ ಸುತ್ತಿದ್ದರು. ಅವರ ಬೆಂಬಲಿತ ಶಾಸಕರು ಮತ್ತು ಮಂತ್ರಿಗಳು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು.15ಕ್ಕೂ ಹೆಚ್ಚು ಶಾಸಕರು, ರಾಜೇಶ್ ಗೌಡ, ಜ್ಯೋತಿ ಗಣೇಶ್, ರಾಜಗೌಡ, ರೇಣುಕಾಚಾರ್ಯ ಸೇರಿದಂತೆ ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ, ಬಿಜೆಪಿ ನಾಯಕರ ಮತ್ತೊಂದು ಗುಂಪು – ಅವರಲ್ಲಿ ಹೆಚ್ಚಿನವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ದೂರುಗಳ ಪಟ್ಟಿಯನ್ನು ಸಹ ಮಾಡಿಕೊಂಡು ಚರ್ಚೆ ನಡೆಸಿದರು. ಸದ್ಯ ರಾಜ್ಯ ಬಿಜೆಪಿಯಲ್ಲಿ ಮೂರು ಬಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕೆಂದು ಒಂದು ಬಣ, ನಾಯಕತ್ವ ಬದಲಾವಣೆಗೆ ಮತ್ತೊಂದು ಬಣ ಲಾಬಿ ಮತ್ತು ಮೂರನೆಯದು ಸರ್ಕಾರದ ವಿರುದ್ಧದ ದೂರುಗಳನ್ನು ಹೊತ್ತು ಅರುಣ್ ಸಿಂಗ್ ಅವರ ಬಳಿ ನಿನ್ನೆ ಬಂದಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಇದಕ್ಕೆಲ್ಲಾ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ, ರಾಜ್ಯ ಬಿಜೆಪಿ ನಾಯಕರ ಶಮನ, ಭಿನ್ನಮತ ದೂರವಾಗಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇರುತ್ತಾರೆಯೇ ಎಂದು ಕಾದುನೋಡಬೇಕಿದೆ.