ನನ್ನ ಪುತ್ರನ ವಿರುದ್ಧದ ಆರೋಪ ಆಧಾರ ರಹಿತ, ರಾಜ್ಯ ರಾಜಕೀಯ ಗೊಂದಲವೇ ಇಲ್ಲ: ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ರಾಜ್ಯದ ಹಿತಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರೋ ಒಂದಿಬ್ಬರು ವಿರೋಧ ಮಾತನಾಡಬಹುದು, ಅಂತವರು ತಮ್ಮ ಸಮಸ್ಯೆಗಳನ್ನು ಬಂದು ಮಾತನಾಡಿ ಬಗೆಹರಿಸಿಕೊಳ್ಳಲಿ, ನಾಯಕರ ಮಧ್ಯೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ ವಿಶ್ವನಾಥ್ ಆರೋಪಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಅವರ ಬಗ್ಗೆ ಹೈಕಮಾಂಡ್ ತೀರ್ಮಾನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ರಾಜ್ಯದಲ್ಲಿ ರಾಜಕೀಯ ಗೊಂದಲವೇ ಇಲ್ಲ, ಯಾರೋ ಒಂದಿಬ್ಬರು ಮಾಧ್ಯಮಗಳ ಮುಂದೆ ನೀಡುವ ಹೇಳಿಕೆಗಳನ್ನು ನೀವು ಹೈಲೈಟ್ ಮಾಡುತ್ತೀರಿ, ಪಕ್ಷದ ವಿರುದ್ಧ ಮಾತನಾಡುವವರಿಗೆ ನಿನ್ನೆ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ ಎಂದರು.

ವಿಜಯೇಂದ್ರ ವಿರುದ್ಧದ ಕಿಕ್ ಬ್ಯಾಗ್ ಆರೋಪ ಕೂಡ ಆಧಾರ ರಹಿತ, ನೀರಾವರಿ ಇಲಾಖೆಯಲ್ಲಿನ ಟೆಂಡರ್ ಆರೋಪದ ಬಗ್ಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಾರೆ ಎಂದರು.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದೆ. ಜೂನ್ 21ರ ನಂತರ ಯಾವ್ಯಾವುದಕ್ಕೆ ರಿಯಾಯಿತಿ ನೀಡಬೇಕು, ಯಾವ ಚಟುವಟಿಕೆಗಳನ್ನು ಆರಂಭಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ನಾಳೆ ಸಂಜೆಯೊಳಗೆ ತೀರ್ಮಾನಿಸಲಾಗುವುದು ಎಂದರು.

ಅರವಿಂದ್ ಬೆಲ್ಲದ್ ಅವರು ನಿನ್ನೆ ಡಿಜಿಯವರಿಗೆ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ. ನಂತರ ಅವರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿ ತನಿಖೆ ನಡೆಸುವಂತೆ ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!