‘ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದು ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ’- ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ.ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಬಡವರಿಗೆ 10 ಕಿಲೋ ಅಕ್ಕಿ ಮತ್ತು 10 ಸಾವಿರ ಪರಿಹಾರ ಕೊಡುತ್ತಿದ್ದೆವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬದವರಿಗೆ 10 ಕೆ.ಜಿ. ಅಕ್ಕಿ, 10 ಸಾವಿರ ರೂಪಾಯಿ ಕೊಡಿ ಎಂದರೆ  ರಾಜ್ಯ ಬಿಜೆಪಿ ಸರ್ಕಾರ ಕೇಳುತ್ತಿಲ್ಲ. ರಾಜ್ಯ ಸರ್ಕಾರದ ಬಜೆಟ್ 2.42 ಲಕ್ಷ ಕೋಟಿ. ಅದರಲ್ಲಿ 15-20 ಸಾವಿರ ಕೋಟಿಯನ್ನ ಬಡವರಿಗೆ ನೀಡಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ.  ಬಡವರಿಗೆ ನೆರವು ನೀಡಿದರೆ ಇವರ ಮನೆಯ ಗಂಟು ಹೋಗುತ್ತದೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಪ್ರತಿದಿನ ಗಗನಕ್ಕೇರುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಸಂಕಷ್ಟದ ಕಾಲದಲ್ಲಿ ಬಡವರ ನೆರವಿಗೆ ನಿಲ್ಲುತ್ತಿಲ್ಲ. ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಘೋಷಿಸಿರುವ ಪುಡಿಗಾಸಿನ ಪ್ಯಾಕೇಜ್ ಯಾರಿಗೆ ಸಿಗುತ್ತೋ? ಬಿಡುತ್ತೋ? ಗೊತ್ತಿಲ್ಲ. ಕೊರೊನಾದಿಂದ ಮೃತರಾದರೆ ಕುಟುಂಬದಲ್ಲಿ ಒಬ್ಬರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆಸ್ಪತ್ರೆಯಲ್ಲಿ ಕುಟುಂಬದ ಒಬ್ಬರ ಚಿಕಿತ್ಸೆಗೆ ಮಾತ್ರ ಹಣ ಪಡೆಯುವರೇ? ಎಂದು ಪ್ರಶ್ನಿಸಿದ್ದಾರೆ.

ಸೆಪ್ಟಂಬರ್-ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ನಿರೀಕ್ಷೆ ಇದೆ. ಅಷ್ಟರಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಬೇಕು. ಲಸಿಕೆ ಹಾಕಿಸಿಕೊಂಡ ಶೇ.80ರಷ್ಟು ಜನರಿಗೆ ಕೊರೊನಾ ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ರಾಜ್ಯದ ಜನರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!