ರಾಜ್ಯ ಬಿಜೆಪಿ ಒಟ್ಟಾಗಿದೆ, ಸಿಎಂ ಬಿಎಸ್ವೈ ನಾಯಕತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಅರುಣ್ ಸಿಂಗ್
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಯಕತ್ವ ದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.
ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿರುವ ಅವರು, ಯಡಿಯೂರಪ್ಪನವರನ್ನು ನಾಯಕತ್ವದಿಂದ ಬದಲಾವಣೆ ಮಾಡಲಾಗುತ್ತದೆ ಎಂಬ ಊಹಾಪೋಹಗಳ ಮಧ್ಯೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಷಯ ಬಗ್ಗೆ ಈಗಾಗಲೇ ಹೇಳಿದ್ದೇನೆ, ಹೀಗಾಗಿ ಯಾವುದೇ ನೇರ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ.
ಎಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು, ಸಚಿವರು ಮತ್ತು ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಯಾರ ಮಧ್ಯೆಯೂ ಯಾವುದೇ ಭಿನ್ನಮತವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕ ಅರುಣ್ ಸಿಂಗ್ ಉತ್ತರಿಸಿದ್ದಾರೆ. ಪಕ್ಷದ ಶಾಸಕರು ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ಮತ್ತು ಏನಾದರೂ ಸಮಸ್ಯೆಗಳಿದ್ದರೆ ವೈಯಕ್ತಿಕವಾಗಿ ನಾಯಕರ ಬಳಿ ಮಾತನಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಕ್ಷೇತ್ರದಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡಿ, ಪಕ್ಷದ ಕೆಲಸವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಅರುಣ್ ಸಿಂಗ್ ಶಾಸಕರಿಗೆ ಹೇಳಿದ್ದಾರೆ. ಉತ್ತಮ ಕೆಲಸಗಳು ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಡಿಯಲ್ಲಿಯೇ ಸಾಗಲಿದೆ ಎಂದು ಮತ್ತೊಮ್ಮೆ ಒತ್ತಿ ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಮತ್ತೆ ಪತ್ರಕರ್ತರು ಪ್ರಶ್ನಿಸಿದಾಗ, ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ, ಮತ್ತೆ, ಮತ್ತೆ ಅದೇ ಪ್ರಶ್ನೆ ಕೇಳುವುದರಲ್ಲಿ ಉಪಯೋಗವಿಲ್ಲ ಎಂದರು. ಇತ್ತೀಚೆಗೆ ಮಾತನಾಡುವಾಗಲೂ ಯಡಿಯೂರಪ್ಪ ನಾಯಕತ್ವ ಬದಲಾವಣೆಯನ್ನು ಅವರು ತಳ್ಳಿಹಾಕಿದ್ದರು. ಬಿಜೆಪಿಯಲ್ಲಿ ಒಂದು ಬಣ ಯಡಿಯೂರಪ್ಪನವರನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.