ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಕುರಿತ ನಿಲುವು ಸೂಚಿಸಿ- ಹೈ ಕೋರ್ಟ್ ಸೂಚನೆ

ಬೆಂಗಳೂರು, ಜೂ.15: ದ್ವಿತೀಯ ಪಿಯುಸಿ ಇತರ ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವ ಕುರಿತು ಪರಿಶೀಲನೆ ನಡೆಸಿ ತನ್ನ ನಿಲುವು ಸೂಚಿಸುವಂತೆ ಸರಕಾರಕ್ಕೆ ಹೈ ಕೋರ್ಟ್ ಸೂಚನೆ ನೀಡಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸು ಮಾಡುವ ಸರಕಾರದ ಆದೇಶವನ್ನು ಪ್ರಶ್ನಿಸಿ ನಗರದ ಜ್ಞಾನಮಂದಿರ ಎಜುಕೇಷನ್ ಟ್ರಸ್ಟ್ ನ ಎಸ್.ವಿ.ಸಿಂಗೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಸೂಚನೆ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರ

ವಕೀಲ ಆರ್.ಪಿ. ಸೋಮಶೇಖರಯ್ಯ ಅವರು ವಾದಿಸಿ, 2020-21ನೆ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಪ್ರಥಮ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮುಂದಾಗಿದೆ. ಇದೇ ಸೌಲಭ್ಯವನ್ನು ಪುನರಾವರ್ತಿತ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಇಲ್ಲದಿದ್ದರೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಹೇಳಿದರು. 

ಈ‌ ವಿಚಾರವಾಗಿ ವಾದ ಆಲಿಸಿದ ನ್ಯಾಯಪೀಠ, ಪ್ರಥಮ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಪುನರಾವರ್ತಿತ ವಿದ್ಯಾರ್ಥಿ ಗಳನ್ನೂ ಉತ್ತೀರ್ಣಗೊಳಿಸುವ ಕುರಿತು ರಾಜ್ಯ ಸರಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿದೆ. ಹಾಗೂ ಈ ಪ್ರಕರಣದ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.

ಅರ್ಜಿದಾರರ ಮನವಿ ಏನು: 2020-21 ಶೈಕ್ಷಣಿಕ ವರ್ಷದಲ್ಲಿ 7 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಳ್ಳಬೇಕಿತ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸು ಮಾಡಲು ಸರಕಾರ ನಿರ್ಧರಿಸಿದೆ. ಪ್ರಥಮ ಪಿಯು ಪರೀಕ್ಷೆ ಅಂಕ ಪರಿಗಣಿಸಿ ಉತ್ತೀರ್ಣ ಮಾಡುವ ಸಂಬಂಧ ಜೂನ್ 3ರಂದು ರಾಜ್ಯ ಸರಕಾರ ನೋಟಿಫಿಕೇಷನ್ ಹೊರಡಿಸಿದೆ. ಆದರೆ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಈ ಅನುಕೂಲ ಕಲ್ಪಿಸಿಲ್ಲ. ಇದು ತಾರತಮ್ಯ ನೀತಿಯಾಗಿದೆ. ರಾಜ್ಯದಲ್ಲಿ 95 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಅವರನ್ನೂ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಬೇಕು. ಇಲ್ಲದಿದ್ದರೆ ಸರಕಾರದ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Leave a Reply

Your email address will not be published. Required fields are marked *

error: Content is protected !!