ವಾಟ್ಸಪ್ ಚಾಟ್ ನ ಮಾಹಿತಿ – ಸಿಎಂ ಬಿ.ಎಸ್ ಯಡಿಯೂರಪ್ಪ, ವಿಜಯೇಂದ್ರಗೆ ಮತ್ತೊಂದು ಸಂಕಷ್ಟ
ಬೆಂಗಳೂರು ಜೂ.15: ಕೋವಿಡ್ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ..
ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿ ಸಿ ಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಗೆ ದೂರು ನೀಡಲಾಗಿದ್ದು ಕೋವಿಡ್ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಯವರಿಗೆ ಮತ್ತೊಂದು ತಲೆನೋವು ಎದುರಾದಂತಾಗಿದೆ.
ಇನ್ನು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ ಮತ್ತು ವಿರೂಪಾಕ್ಷಪ್ಪ ಯಮಕನಮರಡಿ ಎಂಬವರ ವಿರುದ್ಧ ದೂರು ನೀಡಿದ್ದು, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಬಿಎಸ್ ವೈ ಅವರು ನಾಲ್ಕನೇ ಬಾರಿ ಸಿಎಂ ಆದ ಬಳಿಕ ಅವರ ಮೊಮ್ಮಗ ಶಶಿಧರ ಮರಡಿ ಎಂಬರು ಚಂದ್ರಕಾಂತ್ ರಾಮಲಿಂಗಂ ಎಂಬ ಡೆವಲಪರ್ ರಿಂದ ಬಿಲ್ ಕ್ಲಿಯರಿಂಗ್ ಗಾಗಿ 12 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಣ ವರ್ಗಾವಣೆ ಬಗ್ಗೆ ಶಶಿಧರ ಮರಡಿ ಮತ್ತು ಚಂದ್ರಕಾಂತ್ ಅವರ ನಡುವೆ ನಡೆದ ವಾಟ್ಸಪ್ ಚಾಟ್ ನ ಮಾಹಿತಿಯನ್ನು ದೂರುದಾರ ಟಿ.ಜೆ.ಅಬ್ರಾಹಂ ಅವರು ಇಡಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.