ವಿಶ್ವ ದಾನಿ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತಕ್ಕೆ 14ನೇ ಸ್ಥಾನ!

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಇಡೀ ವಿಶ್ವ ಸಮುದಾಯವನ್ನು ಪರಸ್ಪರ ಸಹಾಯಕ್ಕೆ ನಿಲ್ಲುವಂತೆ ಮಾಡಿದ್ದು, ವಿಶ್ವ ದಾನಿಗಳ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ 14ನೇ ಸ್ಥಾನದಲ್ಲಿದೆ. ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಪಶ್ಚಿಮದ ಆರ್ಥಿಕತೆ ವಿಶ್ವ ದಾನಿಗಳ ಸೂಚ್ಯಂಕದಲ್ಲಿ ಕುಸಿತ ಕಂಡಿದೆ ಎಂದು ವರ್ಲ್ಡ್ ಗಿವಿಂಗ್ ಇಂಡೆಕ್ಸ್ (ಡಬ್ಲ್ಯುಜಿಐ) 2021 ಹೇಳಿದೆ. 

ಚಾರಿಟೀಸ್ ಏಡ್ ಫೌಂಡೇಶನ್ (ಸಿಎಎಫ್) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ಲಾಕ್ ಡೌನ್ ಗಳ ಕಾರಣದಿಂದಾಗಿ ದತ್ತಿ ನೀಡುವಿಕೆಯ ಸ್ಥಾನದಲ್ಲಿ ಅಮೆರಿಕ, ಕೆನಡಾ, ಬ್ರಿಟನ್, ನೆದರ್ಲ್ಯಾಂಡ್ ಗಳು ಅಗ್ರ ಶ್ರೇಣಿಯಿಂದ ಕುಸಿತ ಕಂಡಿವೆ. ವಿಶ್ವದ ಟಾಪ್ 20 ರ ಪಟ್ಟಿಯಲ್ಲಿ ಭಾರತ 14 ನೇ ಸ್ಥಾನದಲ್ಲಿದ್ದು, ದಶಕಗಳ ಹಿಂದಿನ 82 ನೇ ಸ್ಥಾನದಿಂದ ಭಾರತ ಮೇಲೇರಿದೆ. 

ಕೋವಿಡ್-19 ಮೊದಲ ಅಲೆಗೂ ಕೆಲವೇ ವಾರಗಳ ಹಿಂದಷ್ಟೇ ನಡೆಸಿದ ಸಮೀಕ್ಷೆಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗಳು ಮಾತ್ರ ಟಾಪ್ 10 ಶ್ರೇಣಿಯನ್ನು ಉಳಿಸಿಕೊಂಡಿವೆ. ನೈಜೀರಿಯಾ, ಘಾನಾ, ಉಗಾಂಡ, ಕೊಸೋವೋ ಸೇರಿದಂತೆ ಅನೇಕ ರಾಷ್ಟ್ರಗಳು ಇದೇ ಮೊದಲ ಬಾರಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಬೇರೆ ರಾಷ್ಟ್ರಗಳಿಂದ ನೀಡಲಾಗುವ ಚಾರಿಟಿ ಕುಸಿತದಿಂದಾಗಿ ಈ ರಾಷ್ಟ್ರಗಳ ಚಾರಿಟಿಯ ಮೌಲ್ಯ ಏರಿಕೆ ಕಂಡಿದೆ. 

ವಿಶ್ವಾದ್ಯಂತ ಜನರಿಗೆ ಪರಸ್ಪರ ಸಹಾಯ ಮಾಡುವುದು ಏರಿಕೆಯಾದ ಹಿನ್ನೆಲೆಯಲ್ಲಿ 2009 ರಿಂದ ಇದೇ ಮೊದಲ ಬಾರಿಗೆ ಅಪರಿಚಿತರಿಗೂ ಸಹಾಯ ಮಾಡಿದ ಪ್ರಮಾಣ ಏರಿಕೆಯಾಗಿದೆ. 2020 ರಲ್ಲಿ ತಮಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಗೆ ಸಹಾಯ ಮಾಡಿರುವುದಾಗಿ ವಿಶ್ವದ ವಯಸ್ಕ ಜನಸಂಖ್ಯೆಯ ಶೇ.55 ರಷ್ಟು ಮಂದಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!