ದರೋಡೆಕೋರರಿಂದ 13 ಕೆಜಿ ಚಿನ್ನದ ಬಿಸ್ಕೆಟ್ ವಶಕ್ಕೆ- ಸುಪ್ರೀಂ ಕೋರ್ಟ್ ನ್ಯಾಯವಾದಿ ಹೆಸರು ತಳುಕು?
ನೋಯ್ಡಾ ಜೂ.14: ದರೋಡೆಕೋರರಿಂದ 13 ಕೆ.ಜಿ ಚಿನ್ನದ ಬಿಸ್ಕೆಟ್ ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ʼಸುಪ್ರೀಂ ಕೋರ್ಟ್ ನ್ಯಾಯವಾದಿʼ ಎಂದು ಹೇಳಿಕೊಂಡಿರುವ ಕಿಸ್ಲೇ ಪಾಂಡೆ ಎಂಬಾತನನ್ನು ಹೆಸರನ್ನು ಸೂಚಿಸಿದ್ದು ಇದೀಗ ಭಾರೀ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ನೋಯ್ಡಾ ಪೊಲೀಸರು ದರೋಡೆಕೋರರಿಂದ 57ಲಕ್ಷ ರೂ. ಸೇರಿದಂತೆ 1 ಕೋಟಿ ಬೆಲೆಬಾಳುವ ಜಮೀನಿನ ದಾಖಲೆ ಪತ್ರಗಳು ಹಾಗೂ 13.09 ಕೆ.ಜಿಗಳಷ್ಟು ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಕಿಸ್ಲೇ ಪಾಂಡೆ ಹೆಸರು ಕೇಳಿಬಂದಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಆರೋಪಗಳನ್ನು ಪಾಂಡೆ ಅವರು ತಿರಸ್ಕರಿಸಿದ್ದಾರೆ.
ವರದಿಗಳ ಪ್ರಕಾರ,ನೋಯ್ಡಾದ ಸಿಲ್ವರ್ ಸಿಟಿ ಹೌಸಿಂಗ್ ಸೊಸೈಟಿಯ ಫ್ಲ್ಯಾಟ್ನಿಂದ ದೊಡ್ಡ ಪ್ರಮಾಣದ ಚಿನ್ನ,ಆಸ್ತಿ ದಾಖಲೆಗಳು ಮತ್ತು ನಗದು ಕಳವಾಗಿತ್ತು.ಈ ದರೋಡೆ ನಡೆಸಿದ 6ಮಂದಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದರು, ಅಲ್ಲದೆ ಆರೋಪಿ ಗಳಿಂದ ಚಿನ್ನದ ಬಿಸ್ಕತ್ತು,ದಾಖಲೆಗಳು ಸೇರಿದಂತೆ 8.25 ಕೋಟಿ ರೂ.ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿ, ಕಿಸ್ಲೇ ಪಾಂಡೆ ತನ್ನ ಟ್ವಿಟರ್ ಬಯೋನಲ್ಲಿ ʼಸುಪ್ರೀಂ ಕೋರ್ಟ್ ಲಾಯರ್ʼ ಎಂದು ನಮೂದಿಸಿದ್ದಾರೆ. ಪಾಂಡೆ ಹಾಗೂ ಆತನ ತಂದೆಯ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಅವರ ವಿರುದ್ಧ ವಿಚಾರಣೆ ನಡೆಸಲು ಅವರಿಬ್ಬರೂ ಸದ್ಯ ಭಾರತದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.