ಆನ್‌ಲೈನ್ ಶಿಕ್ಷಣ: ಪೂರ್ವ ಪ್ರಾಥಮಿಕ ಮಕ್ಕಳೊಂದಿಗೆ ಆನ್‌ಲೈನ್ ಸಂವಹನ

ಬೆಂಗಳೂರು: ವಿವಾದಿತ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ರಾಜ್ಯದ ಹಲವು ಶಾಲೆಗಳು ಅವೈಜ್ಞಾನಿಕವಾಗಿ ಬೋಧನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್/ಆಫ್ ಲೈನ್ ಬೋಧನೆಯನ್ನು ಸರ್ಕಾರದ ಮಾರ್ಗಸೂಚಿಗಳು ಬರುವವರೆಗೂ ಮಾಡತಕ್ಕದ್ದಲ್ಲ ಎಂದು ಆದೇಶಿಸಿದೆ.

ಆದರೆ ಎಲ್‌ಜೆಕಿಯಿಂದ 5ನೇ ತರಗತಿವರೆಗೆ ಮತ್ತು 6ರಿಂದ 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿದ್ದು ಎರಡು ಸಭೆಗಳನ್ನು ನಡೆಸಿದೆ.

ಈ ಮಧ್ಯೆ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ತಜ್ಞರ  ವರದಿ ಬರುವವರೆಗೆ ಸೀಮಿತ  ಆನ್ ಲೈನ್ ಶಿಕ್ಷಣ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು ಇದರ ಹಿನ್ನೆಲೆಯಲ್ಲಿ ಸರ್ಕಾರವೀಗ ಹೊಸ ಮಧ್ಯಂತರ  ಮಾರ್ಗಸೂಚಿ ಹೊರಡಿಸಿದೆ.

ಪೂರ್ವ ಪ್ರಾಥಮಿಕ ಮಕ್ಕಳಿಗೆ ಆನಲೈನ್ ಶಿಕ್ಷಣ ನೀಡುವಂತಿಲ್ಲ. ಆದರೆ ವಾರಕ್ಕೊಮ್ಮೆ ೩೦ ನಿಮಿಷಕ್ಕೆ ಮೀರದಂತೆ ಪಾಲಕರೊಂದಿಗೆ ಮಾತ್ರ ಆನ್ ಲೈನ್ ಸಂವಹನ ನಡೆಸಲು ಅವಕಾಶ.  ೧ರಿಂದ ೫ನೇ ತರಗತಿಯ ಮಕ್ಕಳಿಗೆ ದಿನ ಬಿಟ್ಟು ದಿನ ಗರಿಷ್ಠ ೩ ದಿನ ೩೦-೪೫ ನಿಮಿಷಗಳ ಎರಡು ಅವಧಿ ಮೀರದಂತೆ ಆನ್  ಲೈನ್ ಶಿಕ್ಷಣವನ್ನು ಸಿಂಕ್ರೋನಸ್ ವಿಧಾನದಲ್ಲಿ ಒದಗಿಸಬಹುದು.  6ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ೫ ದಿನ ೩೦-೪೫ ನಿಮಿಷ ಎರಡು ಅವಧಿಯಲ್ಲಿ ಆನ್ ಲೈನ್ ಶಿಕ್ಷಣ ನೀಡಬಹುದು ಎಂದು ಮಾರ್ಗದರ್ಶಿ ಸೂತ್ರದಲ್ಲಿ ವಿವರಿಸಲಾಗಿದೆ. 

ಆದರೆ ಈ ಮಾರ್ಗಸೂಚಿಯು ಅಂತಿಮ ಮಾರ್ಗಸೂಚಿ ನಿಯಮಾವಳಿ ಬರುವವರೆಗೆ ಮಾತ್ರ ಜಾರಿಯಲ್ಲಿರಲಿದೆ. ಅಲ್ಲದೆ ಈ ಆನ್ ಲೈನ್ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

error: Content is protected !!