ಪೆಟ್ರೋಲ್, ಡೀಸೆಲ್ ದರ ಏರಿಕೆ, ಮನುಷ್ಯತ್ವ ಇಲ್ಲದ ಮೋದಿ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ಮನುಷ್ಯತ್ವವೇ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.

‘ಪ್ರಧಾನಿ ಮೋದಿಯವರದ್ದು ರಾಕ್ಷಸೀ ಪ್ರವೃತ್ತಿ. ಅವರಿಗೆ ಮಾನವೀಯತೆ ಎಂಬುದೇ ಇಲ್ಲ’ ಎಂದು ಅವರು ಕಿಡಿ ಕಾರಿದ್ದಾರೆ. 

ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕೆಪಿಸಿಸಿ ವತಿಯಿಂದ ಸೋಮವಾರ  ಹಮ್ಮಿಕೊಂಡಿದ್ದ ಸೈಕಲ್ ಚಳವಳಿ ಮತ್ತು ಪ್ರತಿಭಟನಾ ರ್ಯಲಿಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು. 

ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತೈಲ ದರವನ್ನು ಕೊಂಚ ಏರಿಸಿದ್ದರೂ ಬಿಜೆಪಿಯವರು ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಗಳನ್ನು ಹೊತ್ತು ಬೀದಿಗೆ ಇಳಿಯುತ್ತಿದ್ದರು. ಇದೀಗ ಪೆಟ್ರೋಲ್, ಡೀಸೆಲ್ ದರ ಗಗನ ಮುಟ್ಟಿದೆ ಆದರೂ ಬಿಜೆಪಿಯವರೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. 

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ್ ದರವನ್ನು ಏರಿಸಿ ಜನ ಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಮನಮೋಹನ ಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಯವರಿಗೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನರನ್ನು ಸುಲಿಗೆ ಮಾಡುವ ಜನ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಕಳೆದ 22 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊರೊನಾ ಪರಿಣಾಮ ಉದ್ಯೋಗ ಇಲ್ಲದೆ ಪರದಾಡುತ್ತಿರುವ ಮಧ್ಯಮ ವರ್ಗದ ಜನತೆ ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಇದರಿಂದ ಭಾರಿ ಹೊಡೆತ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಬ್ಯಾರಲ್‍ಗೆ 130 ಡಾಲರ್‍ನಂತೆ ಮಾರಾಟವಾಗುತ್ತಿದ್ದಾಗಲೇ ಅಂದಿನ ಯುಪಿಎ ಸರ್ಕಾರ ದರ ಏರಿಕೆಯನ್ನು ಈ ಪ್ರಮಾಣದಲ್ಲಿ ಮಾಡಿರಲಿಲ್ಲ. ಹೀಗಾಗಿ ಮೋದಿಯವರು ತಮ್ಮ ಬೆನ್ನು ತಾವೇ ನೋಡಿಕೊಳ್ಳಬೇಕು. 
ಕಚ್ಚಾ ತೈಲ ದರ ಇದೀಗ ಬ್ಯಾರಲ್‍ಗೆ 20-30 ಡಾಲರ್ ನಂತೆ ಮಾರಾಟವಾಗುತ್ತಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಲೀಟರ್‍ಗೆ ₹25-30 ಪ್ರಕಾರ ಮಾರಾಟವಾಗಬೇಕಿತ್ತು. ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಯದ್ವಾತದ್ವ ಏರಿಕೆ ಮಾಡುವ ಮೂಲಕ ₹18 ಲಕ್ಷ ಕೋಟಿ  ಸಂಗ್ರಹ ಮಾಡಿದೆ ಎಂದು ಹೇಳಿದರು. 

ಜನತೆಯ ರಕ್ತ ಹೀರುವ ಸರ್ಕಾರ ಕೇಂದ್ರದಲ್ಲಿದೆ. ಅಲ್ಲಿ ಆಡಳಿತ ನಡೆಸುತ್ತಿರುವವವರು ಮಾನವೀಯತೆಯನ್ನೇ ಮರೆತು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದರು. 

ಸೈಕಲ್ ಚಳವಳಿಯ ಅಂಗವಾಗಿ ಸಿದ್ದರಾಮಯ್ಯ ಅವರು ಬೆಳಿಗ್ಗೆ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಸೈಕಲ್ ನಲ್ಲಿ ತೆರಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!