ಉಡುಪಿ: ಮೆಸ್ಕಾಂ ಕಚೇರಿಯೇ ಕತ್ತಲಲ್ಲಿ!
ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ): ನಗರದಲ್ಲಿ ನಿನ್ನೆ ಸಂಜೆ ಧಾರಾಕಾರವಾಗಿ ಸುರಿದ ಗಾಳಿ, ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ. ಇದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಈ ನಡುವೆ ಉಡುಪಿಯ ಪ್ರಸಾದ್ ನೇತ್ರ ಚಿಕಿತ್ಸಾ ಆಸ್ಪತ್ರೆ ಬಳಿ ಧರೆಗುರುಳಿದ್ದ ವಿದ್ಯುತ್ ಕಂಬವನ್ನು ಇನ್ನೂ ತೆರವು ಗೊಳಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಭಾಗದಲ್ಲಿ ನಾಲ್ಕು ಆಸ್ಪತ್ರೆಗಳು ಇದ್ದು, ಇಂತಹ ಸಂದರ್ಭಗಳಲ್ಲಿ ತುರ್ತು ದುರಸ್ತಿ ಮಾಡಬೇಕಾದ ಇಲಾಖೆ, ಇಂದು ಬೆಳಿಗ್ಗೆಯಾದರೂ ಇತ್ತ ಸುಳಿಯದಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ
ಅಲ್ಲದೆ ವಿದ್ಯುತ್ ಕಂಬ ಧರೆಗೆ ಉರುಳಿದ ಕುರಿತು ದೂರು ನೀಡಲು ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಯಾರು ಕೂಡಾ ಕರೆ ಸ್ವೀಕರಿಸುತ್ತಿರಲಿಲ್ಲ. ಆದ ಕಾರಣ ಸ್ಥಳೀಯರೇ ಉಡುಪಿ ಮೆಸ್ಕಾಂ ಕಚೇರಿಗೆ ಹೋಗಿ ದೂರು ನೀಡಲು ಮುಂದಾಗಿದ್ದರು. ಈ ವೇಳೆ ಮೆಸ್ಕಾಂ ಕಚೇರಿಯಲ್ಲಿಯೇ ವಿದ್ಯುತ್ ಇಲ್ಲದೆ ಸಿಬ್ಬಂದಿಗಳು ದೂರು ಸ್ವೀಕರಿಸಲು ಪರದಾಡುತ್ತಿರುವುದು ಕಂಡುಬಂದಿದೆ. ಬಳಿಕ ಸಿಬ್ಬಂದಿಗಳು ಕತ್ತಲೆಯಲ್ಲಿ ಸಾರ್ವಜನಿಕರ ದೂರು ಬರೆದು ಕೊಂಡರು. ಈ ಬಗ್ಗೆ ದೂರು ನೀಡಲು ಹೋದ ಸಾರ್ವಜನಿಕರು ಜನರಿಂದ ವಿದ್ಯುತ್ ಬಿಲ್ ಸಂಗ್ರಹಿಸುವ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಮೆಸ್ಕಾಂ ಕಚೇರಿಯಲ್ಲಿ ಜನರೇಟರ್, ಇನ್ವರ್ಟರ್ ಅಳವಡಿಸದಿರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ.