| ಉಡುಪಿ ಜೂ.10(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಮೂಲಕ ಜಿಲ್ಲೆಯ ಪಾಸಿಟಿವಿಟಿ ದರ ಕೂಡಾ ಕಡಿಮೆಯಾಗುತ್ತಿದೆ.
ಈ ನಡುವೆ ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರ ಜೂ .14 ರ ನಂತರ ಕೋವಿಡ್ ಲಾಕ್ ಡೌನ್ ಮುಂದುವರೆಸುವಂತೆ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಆದೇಶ ನೀಡಿದ್ದಾರೆ. ಈ 8 ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಹೆಸರು ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಇದೇ ರೀತಿ ಪಾಸಿಟಿವಿಟಿ ದರ ಕಡಿಮೆ ಆದರೆ ಉಡುಪಿ ಜಿಲ್ಲೆಗೆ ಮುಂದಿನ ಲಾಕ್ ಡೌನ್ ನಿಂದ ವಿನಾಯಿತಿ ಸಿಗಬಹುದೇ ಎಂಬ ಕುತೂಹಲ ಹಾಗೂ ನಿರೀಕ್ಷೆ ಹುಟ್ಟಿಕೊಂಡಿದೆ.
ಜಿಲ್ಲೆಯಲ್ಲಿ ಇಂದು 289 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 126, ಕುಂದಾಪುರ 122, ಕಾರ್ಕಳ 40 ಹಾಗೂ ಹೊರ ಜಿಲ್ಲೆಯ ಒಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 3812 ಕೋವಿಡ್ ಸಕ್ರಿಯ ಪ್ರಕರಣ ಗಳಿವೆ.
ಇಂದು ಜಿಲ್ಲೆಯಲ್ಲಿ ಉಡುಪಿಯ 74 ವರ್ಷದ ಓರ್ವ ವ್ಯಕ್ತಿ ಹಾಗೂ ಕಾರ್ಕಳದ 72 ವರ್ಷದ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೂ. 9 ರಂದು ಜಿಲ್ಲೆಯಲ್ಲಿ 241 ಸೋಂಕಿತರು ಆಸ್ಪತ್ರೆ ಯಿಂದ ಗುಣಮುಖರಾಗಿ ಹೊರ ಬಂದಿದ್ದು, ಈ ವರೆಗೆ ಒಟ್ಟು 59,416 ಮಂದಿ ಗುಣಮುಖರಾಗಿದ್ದಾರೆ.
ಜೂ.9ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 6, 26,292ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 63,581 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 353 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 5 ಬ್ಲಾಕ್ ಫಂಗಸ್ ಪ್ರಕರಣಗಳು ಸಕ್ರಿಯವಾಗಿದೆ. ಈ ವರೆಗೆ ಉಡುಪಿಯಲ್ಲಿ 4, ಕುಂದಾಪುರದಲ್ಲಿ 4 ಹಾಗೂ ಹೊರ ಜಿಲ್ಲೆಯ 11ಮಂದಿಯಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 12 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇಬ್ಬರು ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ಒಟ್ಟು 19 ಬ್ಲಾಕ್ ಫಂಗಸ್ ನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ.
| |