ಹೊಸದಿಲ್ಲಿ: ಲಸಿಕೆ ಉತ್ಪಾದನೆಗೆ ಮಿಷನ್ ಇಂದ್ರಧನುಷ್ ಆರಂಭಿಸಲಾಗಿದೆ. ಕೆಲ ರಾಜ್ಯಗಳಿಂದ ಲಸಿಕೆ ಕೆಲಸ ವಿಕೇಂದ್ರಿಕರಣಕ್ಕೆ ಒತ್ತಾಯ ಕೇಳಿಬಂದಿದೆ. ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಗೊತ್ತಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ವ್ಯಾಕ್ಸಿನ್ ಉತ್ಪಾದನೆ ಮಾಡಲಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಿದೆ. ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ. ರಾಜ್ಯ ಸರಕಾರಗಳ ಲಸಿಕೆ ಬೇಡಿಕೆಯನ್ನುಕೇಂದ್ರ ಈಡೇರಿಸಲಿದೆ ಎಂದು ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾಡಿರುವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ದೇಶದ ಯಾರೊಬ್ಬರೂ ಕೂಡ ಉಪವಾಸದಿಂದ ಮಲಗಬಾರದು. ದೀಪಾವಳಿಯ ತನಕ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡಲಿದೆ ಎಂದು ಮೋದಿ ಘೋಷಿಸಿದ್ದಾರೆ. ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ರೂ.150 ಮಾತ್ರ ಸೇವಾ ಶುಲ್ಕ ಇರಲಿದೆ. ದೇಶಾದ್ಯಂತ ಲಸಿಕೆ ನೀಡಿಕೆ ವೇಗವಾಗಿ ನಡೆಯುತ್ತಿದೆ. ವ್ಯಾಕ್ಸಿನ್ ನೀಡಿಕೆ 70ರಿಂದ 90 ಶೇ. ಏರಿಕೆಯಾಗಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ದೇಶದ 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ದೊಡ್ಡ ಸವಾಲಾಗಿದೆ.
ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ನೀಡಿಕೆ ನಿಧಾನಗತಿಯಲ್ಲಿದೆ. 23 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಲಸಿಕೆಯು ಕೊರೋನ ವಿರುದ್ಧ ಹೋರಾಟದಲ್ಲಿ ಏಕೈಕ ಅಸ್ತ್ರವಾಗಿದೆ ಎಂದು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊರೋನ ಈ ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ. ಆಧುನಿಕ ಜಗತ್ತು ಈ ಹಿಂದೆಂದೂ ಇಂತಹ ಸಂಕಷ್ಟ ಎದುರಿಸಿರಲಿಲ್ಲ. ಕೊರೋನ ಇಡೀ ಜಗತ್ತನೇ ಕಂಗೆಡಿಸಿದೆ. ಭಾರತ ಶಕ್ತಿಮೀರಿ ಕೊರೋನ ವಿರುದ್ಧ ಹೋರಾಡಿದೆ. ಕೊರೋನದಿಂದಾಗಿ ನಮ್ಮ ಜೊತೆಗಿದ್ದ ಹಲವರನ್ನು ಕಳೆದುಕೊಂಡಿದ್ದೇವೆ. ಹೊಸ ಆರೋಗ್ಯ ಸೌಕರ್ಯ ಮಾಡಲಾಗಿದೆ. ರೈಲು, ವಿಮಾನಗಳ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಕೊರೋನ ರೂಪಾಂತರಿ ಅದೃಶ್ಯ ವೈರಿಯಾಗಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡಿದ್ದರಿಂದ ಕೆಲವು ಜೀವ ಉಳಿದಿದೆ. ವಿದೇಶದಲ್ಲಿ ಲಸಿಕೆ ಉತ್ಪಾದನೆಯಾದರೂ ನಮಗೆ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.
| | |