ಕೋವಿಶೀಲ್ಡ್‌ 2 ನೇ ಡೋಸ್‌ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗದರ್ಶಿ ಸೂತ್ರ ಬಿಡುಗಡೆ

ನವದೆಹಲಿ: ಕೆಲ ವರ್ಗಗಳಿಗೆ ನಿಗದಿತ 84 ದಿನಗಳ ಅವಧಿಗೆ ಮೊದಲೇ ಕೋವಿಶೀಲ್ಡ್‌ ಲಸಿಕೆ 2ನೇ ಡೋಸ್‌ ಅನ್ನು ನೀಡುವ ಸಂಬಂಧ ಕೇಂದ್ರ ಸರ್ಕಾರ ಸೋಮವಾರ ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಆ ಪ್ರಕಾರ, ಶೈಕ್ಷಣಿಕ ಉದ್ದೇಶಕ್ಕಾಗಿ ವಿದೇಶಗಳಿಗೆ ತೆರಳುವವರು, ಉದ್ಯೋಗಕ್ಕಾಗಿ ತೆರಳುವವರು ಮತ್ತು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ನಿಗದಿತ ಅವಧಿಗೂ ಮೊದಲೇ 2ನೇ ಡೋಸ್‌ ಲಸಿಕೆಯನ್ನು ನೀಡಲಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಈ ವರ್ಗಗಳಿಗೂ ಎರಡನೇ ಡೋಸ್‌ ಲಸಿಕೆಯನ್ನು ಮೊದಲ ಡೋಸ್‌ ಪಡೆದ 28 ದಿನದ ನಂತರವೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ವಿಶೇಷ ಸಂದರ್ಭಗಳಲ್ಲಿ ಅವಧಿಗೆ ಮೊದಲೇ 2ನೇ ಡೋಸ್‌ ಲಸಿಕೆ ಪಡೆಯಲು ಆಗುವಂತೆ ಕೋ–ವಿನ್‌ ಸಿಸ್ಟಮ್‌ನಲ್ಲಿಯೂ ಅಗತ್ಯ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದೆ.

ಶಿಕ್ಷಣ, ಉದ್ಯೋಗ ನಿಮಿತ್ತ ವಿದೇಶಗಳಿಗೆ ತೆರಳುವವರಿಗೆ ಅವಧಿಗೆ ಮೊದಲೇ 2ನೇ ಡೋಸ್ ಲಸಿಕೆ ನೀಡಲು ಕೋರಿ ಹಲವು ಮನವಿಗಳು ಬಂದಿದ್ದವು. 2ನೇ ಡೋಸ್ ಪಡೆಯಲು ನಿಗದಿತ 84 ದಿನಗಳ ಮೊದಲೇ ವಿದೇಶಕ್ಕೆ ತೆರಳುವವರಿಗೆ ಇದು ನೆರವಾಗಲಿದೆ. ಈ ವಿಷಯವನ್ನು ಉನ್ನತಾಧಿಕಾರಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

2ನೇ ಡೋಸ್ ಲಸಿಕೆ ನೀಡುವ ಮುನ್ನ ಮೊದಲ ಡೋಸ್ ಪಡೆದು 28 ದಿನ ಕಳೆದಿವೆಯೇ ಎಂಬುದು ಸೇರಿದಂತೆ, ವಿದೇಶ ಪ್ರವಾಸ ಕುರಿತ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ ಸಂಬಂಧಿತ ಕೇಂದ್ರಗಳು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ 

Leave a Reply

Your email address will not be published. Required fields are marked *

error: Content is protected !!