ಜನರಿಂದ ಅಪಪ್ರಚಾರ, ವೈದ್ಯರ ಮೇಲೆ ಹಲ್ಲೆ- ಪ್ರಧಾನಿ ಮಧ್ಯಪ್ರವೇಶಕ್ಕೆ ಐಎಂಎ ಮನವಿ
ನವದೆಹಲಿ: ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಅಪ ಪ್ರಚಾರ ಮಾಡುತ್ತಿರುವ ಜನರ ವಿರುದ್ಧ ಸೂಕ್ತ ಕ್ರಮ ಮತ್ತು ವೈದ್ಯರು ಭೀತಿಯಿಲ್ಲದೆ ಕೆಲಸ ಮಾಡುವಂತಾಗಲು ತಾವು ಮಧ್ಯ ಪ್ರವೇಶಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಲಸಿಕೆ ಅಭಿಯಾನದ ವಿರುದ್ಧ ಅಪಪ್ರಚಾರ ನಡೆಸುವ ಯಾವುದೇ ವ್ಯಕ್ತಿ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897, ಭಾರತೀಯ ಅಪರಾಧ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಪ್ರಕರಣ ದಾಖಲಿಸಬೇಕು, ಕೋವಿಡ್-19 ಸೋಂಕಿತ ರೋಗಿಗಳ ಚಿಕಿತ್ಸೆಗೆ ಆರೋಗ್ಯ ಸಚಿವಾಲಯ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿ ವಿರುದ್ಧ ಸಾಮಾನ್ಯ ಜನರಲ್ಲಿ ಅನುಮಾನ ಉಂಟುಮಾಡುವ ಯಾವುದೇ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಆರೋಗ್ಯ ಸಚಿವಾಲಯ ದಿಂದ ಅನುಮೋದನೆ ಪಡೆಯದೆ ಜನರನ್ನು ದಡ್ಡರನ್ನಾಗಿಸುವ ಯಾವುದೇ ವ್ಯಕ್ತಿಯ ಪ್ರಯತ್ನ ಮತ್ತು ಸೋಕಾಲ್ಡ್ ಔಷಧಗಳನ್ನು ಮೊಟಕುಗೊಳಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕರ್ತವ್ಯ ನಿರತ ವೈದ್ಯರು ಮತ್ತಿತರ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಜನರಿಗೆ 10 ವರ್ಷಗಳ ಕಾಲ ಜೈಲಿಗೆ ಕಳುಹಿಸು ವಂತಹ ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಸ್ಥಾಪನೆಗಳು(ಹಿಂಸಾಚಾರ ಮತ್ತು ಆಸ್ತಿಗೆ ಹಾನಿ) ಮಸೂದೆ 2019 ತಕ್ಷಣವೇ ಪ್ರಕಟಿಸಬೇಕು. ಇಂತಹ ಹೀನ ಕೃತ್ಯಗಳಲ್ಲಿ ತೊಡಗಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಆದ್ದರಿಂದ ಸಮಾಜ ವಿರೋಧಿ ಶಕ್ತಿಗಳು ಆರೋಗ್ಯ ಸಿಬ್ಬಂದಿ ಮೇಲೆ ದಾಳಿಯಲ್ಲಿ ತೊಡಗಿಸಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದು ಐಎಂಎ ಹೇಳಿದೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೋವಿಡ್-ಸಾಂಕ್ರಾಮಿಕದಿಂದ ಮೃತಪಟ್ಟ ವೈದ್ಯರ ಕುಟುಂಬಗಳಿಗೆ ವಿಮೆಯನ್ನು ನೀಡುತ್ತಿರುವುದಕ್ಕೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿರುವ ಐಎಂಎ,ಯೋಜನೆ ಅನುಷ್ಠಾನದಲ್ಲಿನ ಅಡೆತಡೆಯಿಂದಾಗಿ ಮೊದಲ ಅಲೆಯಲ್ಲಿ ಮೃತಪಟ್ಟ 754 ವೈದ್ಯರ ಪೈಕಿ, ಕೇವಲ 168 ವೈದ್ಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯ ವಾಗಿದೆ ಎಂದು ಪ್ರಧಾನಿಯ ಗಮನಕ್ಕೆ ತರಲಾಗಿದೆ.
ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಲಸಿಕೆಗಳು ಇರಲುಬಿಡದೆ 18ವರ್ಷಕ್ಕೂ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು, ಕೋವಿಡ್ -19 ರ ನಂತರದ ತೊಡಕುಗಳನ್ನು ವಿವರವಾಗಿ ಅಧ್ಯಯನ ಮಾಡಲು ಮತ್ತುಎಲ್ಲಾ ಔಷಧ ವಿಭಾಗ ಗಳಲ್ಲಿ ಬಹುಮುಖಿ ಚಿಕಿತ್ಸೆಯ ಮಾರ್ಗಸೂಚಿಗಳನ್ನು ಹೊರತರುವಂತೆ ಪ್ರತ್ಯೇಕ ಸಂಶೋಧನಾ ಕೋಶವನ್ನು ಸ್ಥಾಪಿಸುವಂತೆ ಐಎಂಎ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ.
ಮಾನಸಿಕ ಹಾಗೂ ದೈಹಿಕವಾಗಿ ಯಾವುದೇ ಭಯವಿಲ್ಲದೆ ವೈದ್ಯಕೀಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಲು ವಿಶ್ವಾಸ ಮೂಡಿಸಲು ಜೂ.18ರಂದು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿರುವುದಾಗಿ ಐಎಂಎ ಪತ್ರದಲ್ಲಿ ತಿಳಿಸಿದೆ.