ಮೀನುಗಾರಿಕಾ ಬೋಟ್ ಗಳಲ್ಲಿ ಅಧಿಕಾರಿಗಳ ನಿಯೋಜನೆ!

ಕೊಚ್ಚಿ: ಲಕ್ಷದ್ವೀಪದಲ್ಲಿನ ಆಡಳಿತ ಇತ್ತೀಚಿನ ದಿನಗಳಲ್ಲಿ ಭಾರಿ ವಿರೋಧದ ನಡುವೆಯೂ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು,  ಮೀನುಗಾರಿಕೆ ಬೋಟ್ ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಮತ್ತೊಂದಷ್ಟು ಹೊಸ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗಿದೆ. 

ದ್ವೀಪದ ಸ್ಥಳೀಯರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಸ್ಥಳೀಯ ಆಡಳಿತ ಮಾತ್ರ ಗುಪ್ತಚರ ಮಾಹಿತಿ ಕಲೆಹಾಕುವುದಕ್ಕೆ ಹಾಗೂ ಭದ್ರತಾ ಮೇಲ್ವಿಚಾರಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮೀನುಗಾರಿಕೆ ಬೋಟ್ ಗಳಲ್ಲಿ ಜವಾಬ್ದಾರಿಯುತ ಸರ್ಕಾರಿ ನೌಕರರನ್ನು ನೇಮಕ ಮಾಡುವುದೂ ಸೇರಿದಂತೆ ಹಲವು ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗಿದೆ. 

ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದಂತೆಯೂ ಜೂ.04 ರಂದು ಆಡಳಿತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ತೆಂಗಿನ ಚಿಪ್ಪುಗಳನ್ನು, ಮರದ ಎಲೆಗಳನ್ನು, ಎಳನೀರಿನ ಚಿಪ್ಪು ಗಳನ್ನು ಸಾರ್ವಜನಿಕ ಪ್ರದೇಶಗಳಿಂದ ಹೊರ ತೆಗೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹೆಚ್ಚಿನ ಒತ್ತು ನೀಡಲಾಗಿದೆ.  ಲಕ್ಷದ್ವೀಪದ ಆಡಳಿತ ಕೈಗೊಳ್ಳುತ್ತಿರುವ ಹೊಸ ಕ್ರಮಗಳಿಗೆ ಸಂಸದ ಮೊಹಮ್ಮದ್ ಫೈಜಲ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಹೊಸ ಕ್ರಮಗಳನ್ನು “ಅಪಹಾಸ್ಯ” ಎಂದು ಟೀಕಿಸಿರುವುದಷ್ಟೇ ಅಲ್ಲದೇ ತಕ್ಷಣವೇ ಹಿಂಪಡೆಯಬೇಕೆಂದೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಲಕ್ಷದ್ವೀಪದಲ್ಲಿ ಪರಿಣಾಮಕಾರಿಯಾಗಿ ಗುಪ್ತಚರ ಮಾಹಿತಿ ಸಂಗ್ರಹ ಮಾಡುವುದಕ್ಕಾಗಿ ಮೀನುಗಾರಿಕೆ ಬೋಟ್ ಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿಯೋಜನೆ ಮಾಡುವ ಸಂಬಂಧ ಆಡಳಿತದ ಪ್ರಧಾನ ಕಾರ್ಯದರ್ಶಿ ಹಾಗೂ ಸಲಹೆಗಾರರು ಮೇ.28 ರಂದು ಸಭೆಯನ್ನು ನಡೆಸಿದ್ದರು. ಸ್ಥಳೀಯ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕೆ, ಸ್ಥಳೀಯ ಮೀನುಗಾರಿಕೆ ಬೋಟ್ ಗಳ ಮೇಲೆ, ಸಿಬ್ಬಂದಿಗಳ ಮೇಲೆ  ಭದ್ರತಾ ದೃಷ್ಟಿಯಿಂದ ತೀವ್ರ ನಿಗಾವಹಿಸುವುದಕ್ಕೆ, ದ್ವೀಪಕ್ಕೆ ಭೇಟಿ ನೀಡುವ ಪ್ರಯಾಣಿಕರ ಮೇಲೆ ನಿಗಾ ವಹಿಸುವುದಕ್ಕೆ, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದಕ್ಕೆ ನಿರ್ಧರಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!