ಸಿಎಂ ಬದಲಾವಣೆ ಚರ್ಚೆ- ದೆಹಲಿಯಲ್ಲಿ ಬಿಜೆಪಿ ಮುಖಂಡರ ಸರಣಿ ಸಭೆ: ರಾಜ್ಯ ನಾಯಕರಲ್ಲಿ ತಲ್ಲಣ!

ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ, ದೆಹಲಿಯಲ್ಲಿ ಕರ್ನಾಟಕ ರಾಜಕೀಯ ಕುರಿತಂತೆ ಮೇಲಿಂದ ಮೇಲೆ ಸಭೆ, ಚರ್ಚೆಗಳು ನಡೆಯುತ್ತಿವೆ. ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ಬಿರುಸಿನ ರಾಜಕೀಯ ಚಟುವಟಿಕೆಗಳು, ಹಾಗೂ ಮುಖಂಡರ ಹೇಳಿಕೆಗಳು ರಾಜ್ಯ ಬಿಜೆಪಿ ನಾಯಕರಲ್ಲಿ ತಲ್ಲಣ ಮೂಡಿಸುತ್ತಿವೆ. ಮುಂದಿನ ದಿನಗಳಲ್ಲಿ ಮಹತ್ತರವಾದ ಬದಲಾವಣೆಯಾಗುತ್ತದೆ ಎಂಬುದನ್ನು ಈ ಬೆಳವಣಿಗೆಗಳು ಸೂಚ್ಯವಾಗಿ ತಿಳಿಸುತ್ತಿವೆ.

ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ  ನವದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದರು, ಅದಾದ ನಂತರ ಸಿಎಂ ಹುದ್ದೆ ಆಕಾಂಕ್ಷಿ ಮುರುಗೇಶ್ ನಿರಾಣಿ ಕೂಡ ದೆಹಲಿಗೆ ತೆರಳಿದ್ದರು. ಇನ್ನೂ ದೆಹಲಿ ಯಿಂದ ವಾಪಾಸಾದ ಸಚಿವ ಸಿಪಿ ಯೋಗೇಶ್ವರ್ ರಾಜ್ಯ ನಾಯಕರುಗಳಾದ ಶ್ರೀನಿವಾಸ್ ಪ್ರಸಾದ್, ಮತ್ತು ಮೈಸೂರು ಎಂಎಲ್ ಸಿ ಅಡಗೂರು ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಹೋಗಿರಲಿಲ್ಲ, ಬದಲಿಗೆ ಇಡಿ ನಡೆಸುತ್ತಿರುವ ವಿಚಾರಣೆಗಾಗಿ ತೆರಳಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದರು. ಹೈಕಮಾಂಡ್ ಸೂಚಿಸಿದ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಪಕ್ಷದೊಳಗಿನ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಯಡಿಯೂರಪ್ಪ ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಸಿ.ಟಿ ರವಿ ಮೂರು ದಿನಗಳ ಕಾಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಕೇಂದ್ರ ನಾಯಕರ ಜೊತೆ ಸಭೆಯಲ್ಲಿ ಭಾಗವಹಿಸಿದ್ದರು. ಮತ್ತೊಬ್ಬ ಪ್ರಮುಖ ಲಿಂಗಾಯತ ನಾಯಕ  ಮುರುಗೇಶ್ ನಿರಾಣಿ  ದೆಹಲಿಗೆ ತೆರಳಿದ್ದು ಶನಿವಾರ ವಾಪಾಸಾಗಿದ್ದಾರೆ. ಅ ನಾಯಕರುಗಳ ರಹಸ್ಯ ಸಭೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಚರ್ಚೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟವಾಗಿದೆ.

ಇನ್ನೂ ಕೇಂದ್ರ ಬಿಜೆಪಿ ನಾಯಕರುಗಳ ಜೊತೆ ಮುರುಗೇಶ್ ನಿರಾಣಿ ಅವರ ಸಂಪರ್ಕವಿರುವುದು, ವಿಶೇಷವಾಗಿ ಗೃಹಸಚಿವ ಅಮಿತ್ ಶಾ ಅವರೊಂದಿಗಿನ ಸಂಬಂಧ ಗುಟ್ಟಾಗಿ ಉಳಿದಿಲ್ಲ. ಇದರ ಜೊತೆಗೆ ಶುಕ್ರವಾರ ಮತ್ತು ಶನಿವಾರ ನಿರಾಣಿ ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ. ಇನ್ನೂ 10 ದಿನಗಳ ಹಿಂದೆ ಸಿಪಿ ಯೋಗೇಶ್ವರ ಮತ್ತು ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ತೆರಳಿದ್ದರಿಂದ ನಿರಾಣಿ ತಮ್ಮ ಯೋಜನೆ ಬದಲಾಯಿಸಿದ್ದರು.

ದೆಹಲಿಯಿಂದ ಹಿಂದಿರುಗಿದ ಯೋಗೀಶ್ವರ, ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಬಯಸಿದ್ದರು, ಆದರೆ ನಂತರದ ಬೆಳವಣಿಗೆಗಳು ಅವರ ಮನಸ್ಸನ್ನು ಬದಲಾಯಿಸಿದರು.  ಅವರ ವಿರುದ್ಧ ಸಹಿ ಸಂಗ್ರಹವಾಗುತ್ತಿದೆ ಎಂಬ ವಿಷಯ ತಿಳಿದ ನಂತರ ಸ್ವಾಮೀಜಿಗಳ ಮೊರೆ ಹೋದ ಯೋಗೇಶ್ವರ  ಮೈಸೂರಿನ ಜೆಎಸ್ ಎಸ್ ಮತ್ತು ಆದಿ ಚುಂಚನಗಿರಿ ಸ್ವಾಮೀಜಿಗಳನ್ನು ಭೆಟಿ ಮಾಡಿದ್ದರು

Leave a Reply

Your email address will not be published. Required fields are marked *

error: Content is protected !!