ಕೇಂದ್ರದಿಂದ ‘ಹಗೆತನದ ರಾಜಕೀಯ’- ಬಂಗಾಳದ ಕಲ್ಯಾಣಕ್ಕಾಗಿ ಮೋದಿಯವರ ಕಾಲು ಹಿಡಿಯಲು ಸಿದ್ಧ: ಮಮತಾ

ಕೋಲ್ಕತಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಹಗೆತನ ರಾಜಕೀಯ’ವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಂಗಾಳದ ಕಲ್ಯಾಣಕ್ಕಾಗಿ ಪ್ರಧಾನಿಗಳ ಕಾಲು ಹಿಡಿಯಲು ಸಿದ್ಧ ಎಂದು ಹೇಳಿದ್ದಾರೆ.  

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯರನ್ನು ವಾಪಸ್ ಕರೆಸಿಕೊಂಡಿರುವ ತನ್ನ ಆದೇಶವನ್ನು ಹಿಂತೆಗೆದುಕೊಳ್ಳಬೇಕು. ಅಲ್ಲದೆ ಕೋವಿಡ್ ನಂತಹ ಬಿಕ್ಕಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಜನರಿಗಾಗಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸರ್ಕಾರಕ್ಕೆ ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಅವರಿಗೆ ವಿಧಾನಸಭಾ ಚುನಾವಣೆಯ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಪಶ್ಚಿಮ ಬಂಗಾಳದ ಬೆಳವಣಿಗೆ ಮತ್ತು ಅಭಿವೃದ್ಧಿಯ ಸಲುವಾಗಿ ಮೋದಿಯ ಪಾದಗಳನ್ನು ಮುಟ್ಟಲು ತಾನು ಸಿದ್ಧ ಎಂದು ಬ್ಯಾನರ್ಜಿ ಹೇಳಿದ್ದಾರೆ.

‘ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ನೀವು(ಮೋದಿ ಮತ್ತು ಶಾ) ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನೀವು ಮೊದಲ ದಿನದಿಂದ ನಮಗೆ ಸಮಸ್ಯೆಗಳನ್ನು ಕೊಡಲು ಪ್ರಾರಂಭಿಸಿದ್ದೀರಿ. ಮುಖ್ಯ ಕಾರ್ಯದರ್ಶಿಯ ತಪ್ಪು ಏನು?” ಕೋವಿಡ್ ಬಿಕ್ಕಟ್ಟಿನ ಮಧ್ಯೆ ಮುಖ್ಯ ಕಾರ್ಯದರ್ಶಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಕೇಂದ್ರವು ಹಗೆತನದ ರಾಜಕೀಯ ಮಾಡುತ್ತಿದೆ ಎಂದರು.

ಯಸ್ ಚಂಡಮಾರುತದ ವಿನಾಶದ ಕುರಿತು ಮೋದಿಯವರ ಪರಿಶೀಲನಾ ಸಭೆಗೆ ಗೈರಾಗಿದ್ದ ಸಂಬಂಧ ಎದುರಾದ ಟೀಕೆಗಳ ಬಗ್ಗೆ ಮಾತನಾಡಿದ ಬ್ಯಾನರ್ಜಿ, ‘ಇದು ಪ್ರಧಾನಿ ಮತ್ತು ಸಿಎಂ ನಡುವೆ ನಡೆಯಬೇಕಿತ್ತು. ಬಿಜೆಪಿ ನಾಯಕರನ್ನು ಅಧಿವೇಶನಕ್ಕೆ ಕರೆಸಿದ್ದೇಕೆ?” ಚಂಡಮಾರುತದ ವಿಕೋಪಕ್ಕೆ ಗುರಿಯಾಗಿರುವ ಗುಜರಾತ್ ಮತ್ತು ಒಡಿಶಾದಲ್ಲಿ ನಡೆದ ಪರಿಶೀಲನಾ ಸಭೆಗಳಿಗೆ ಪ್ರತಿಪಕ್ಷ ನಾಯಕರನ್ನು ಆಹ್ವಾನಿಸಲಾಗಿಲ್ಲ. ಆದರೆ ಇಲ್ಲಿ ಮಾತ್ರ ಏಕೆ ಎಂದು ಹೇಳಿದರು. 

ಕೇಂದ್ರ ಸರ್ಕಾರ ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯರನ್ನು ಅಧಿಕಾರಿಯನ್ನು ತಕ್ಷಣವೇ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ, ಈ ಕ್ರಮವನ್ನು ಆಡಳಿತ ತೃಣಮೂಲ ಕಾಂಗ್ರೆಸ್ ‘ಬಲವಂತದ ಡೆಪ್ಯುಟೇಶನ್’ ಎಂದು ಕರೆದಿದೆ.

ಪಶ್ಚಿಮ ಬಂಗಾಳದ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಬಂಡೋಪಾಧ್ಯಾಯ 60 ವರ್ಷ ತುಂಬಿದ ನಂತರ ಮೇ 31ರಂದು ನಿವೃತ್ತಿ ಹೊಂದಬೇಕಿತ್ತು. ಆದರೆ, ಕೇಂದ್ರದ ಅನುಮೋದನೆಯ ನಂತರ ಅವರಿಗೆ ಮೂರು ತಿಂಗಳ ವಿಸ್ತರಣೆ ನೀಡಲಾಯಿತು. ಆದರೆ ಇದೀಗ ದಿಢೀರ್ ಅಂತ ನಾಲ್ಕು ದಿನಕ್ಕೆ ಅಲಪನ್ ರನ್ನು ಹಿಂದಕ್ಕೆ ಕರೆಸಿಕೊಂಡಿದ್ದೇಕೆ ಎಂದು ದೀದಿ ಪ್ರಶ್ನಿಸಿದರು

Leave a Reply

Your email address will not be published. Required fields are marked *

error: Content is protected !!