ಒಡಿಶಾ-ಪಶ್ಚಿಮ ಬಂಗಾಳದತ್ತ ‘ಯಾಸ್’ ಚಂಡಮಾರುತ- 11 ಲಕ್ಷ ಜನರ ಸ್ಥಳಾಂತರ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್‌’ ಚಂಡಮಾರುತವು ಒಡಿಶಾ-ಪಶ್ಚಿಮ ಬಂಗಾಳದತ್ತ ಧಾವಿಸುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

ಈಗಾಗಲೇ ಉಭಯ ರಾಜ್ಯಗಳ ಕರಾವಳಿ ತೀರದಲ್ಲಿ ಗಾಳಿಯು ಅತ್ಯಂತ ವೇಗ ಪಡೆದುಕೊಂಡಿದ್ದು, ಒಡಿಶಾದ ಭದ್ರಕ್‌ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಇಂದು ಮಧ್ಯಾಹ್ನ ಚಂಡಮಾರುತ ಅಪ್ಪಳಿಸಲಿದೆ. ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಅವರು ಬುಧವಾರ ಬೆಳಗ್ಗೆ  ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಯಸ್‌’ ಚಂಡಮಾರುತ ಮಧ್ಯಾಹ್ನದ ವೇಳೆಗೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.

ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ 130 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ ವೇಗ ಮತ್ತಷ್ಟು ತೀವ್ರವಾಗಲಿದೆ. 155 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

11 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ
ಚಂಡಮಾರುತ ಅಪ್ಪಳಿಸುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಪೂರ್ವ ಕರಾವಳಿಯಲ್ಲಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳದ 11ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗಿದೆ. ನೆರೆಯ ಜಾರ್ಖಂಡ್‌ಗೂ ಮುನ್ನೆಚ್ಚರಿಕೆ ನೀಡಲಾಗಿದೆ. ಚಂಡ ಮಾರುತದ ಪರಿಣಾಮ ಎದುರಿಸಲು ಸಿದ್ಧತೆ  ನಡೆಸಲಾಗಿದೆ. ಧಾಮ್ರ ಹಾಗೂ ಚಾಂದ್‌ಬಾಲಿ ಮಧ್ಯೆ ಚಂಡಮಾರುತವು ಭೂಸ್ಪರ್ಶ ಮಾಡಬಹುದು ಎಂದು ಹೇಳಲಾಗಿದೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಆರಂಭವಾಗಿದೆ. ಅದು ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ಮಂಗಳವಾರ ಮಧ್ಯರಾತ್ರಿಯ ವೇಳೆಗೆ ಗಂಟೆಗೆ 80 ಕಿ.ಮೀ.  ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಚಂಡಮಾರುತ ಭೂಸ್ಪರ್ಶ ಮಾಡುವುದಕ್ಕೂ ಆರು ಗಂಟೆ ಮುನ್ನ ಮತ್ತು ಆರುಗಂಟೆಗಳ ನಂತರದ ಅವಧಿಯಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ದೊಡ್ಡ ದೊಡ್ಡ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳುವ ಅಪಾಯವಿದೆ. ಚಾಂದ್‌ಬಾಲಿ ಜಿಲ್ಲೆಯಲ್ಲಿ ಗರಿಷ್ಠ ಹಾನಿಯಾಗುವ ಸಾಧ್ಯತೆ ಇದೆ ಎಂದು ಮಹಾಪಾತ್ರ  ಮುನ್ನೆಚ್ಚರಿಕೆ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್‌ನ 112 ತಂಡಗಳ ನಿಯೋಜನೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 112 ತುಕಡಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 52 ತಂಡಗಳನ್ನು ಒಡಿಶಾಕ್ಕೆ ಹಾಗೂ 45 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ. ಉಳಿದ ತಂಡಗಳು ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್‌ ಹಾಗೂ ಅಂಡಮಾನ್‌ ನಿಕೋಬಾರ್‌ನಲ್ಲಿ  ನಿಯೋಜನೆಗೊಂಡಿವೆ. ಅಂತೆಯೇ ಭಾರತೀಯ ಸೇನೆಯು ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿರುವ 17 ತುಕಡಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ. ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಈ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!