ಬಿಜೆಪಿ ವರ್ಚಸ್ಸು ಹೆಚ್ಚಳ- ಆರ್‌ಎಸ್‌ಎಸ್‌ನ ಸಭೆಯಲ್ಲಿ ಮೋದಿ ಭಾಗಿ: ಸಂಪುಟ ಪುನರ್‌ ರಚನೆ ಬಗ್ಗೆ ಚರ್ಚೆ

ನವದೆಹಲಿ: ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಗ್ರಹಿಕೆಯು ಪಕ್ಷದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಿರಿಯ ನಾಯಕರು ನಡೆಸಿದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗಿಯಾಗಿದ್ದರು.

ಪಶ್ಚಿಮ ಬಂಗಾಳದಲ್ಲಿ ನಿರೀಕ್ಷಿತ ಸಂಖ್ಯೆಯ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯವಾಗದಿರಲು ಕೋವಿಡ್‌ ನಿರ್ವಹಣೆ ವಿಷಯವೇ ಕಾರಣ ಎಂಬ ಅಭಿ‍ಪ್ರಾಯ ಇದೆ. ಹಾಗಾಗಿ, ಇದೇ ವಿಷಯವು ಉತ್ತರ ಪ್ರದೇಶ ಚುನಾವಣೆಯ ಮೇಲೆಯೂ ಪರಿಣಾಮ ಬೀರಬಹುದೇ ಎಂದು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಭಾನುವಾರ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಲ್‌ ಮತ್ತು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾಗವಹಿಸಿದ್ದರು.

ಸಂಘಟನೆ ಮತ್ತು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ಪಕ್ಷ ಬಿಜೆಪಿಯು ಕೋವಿಡ್‌ನಿಂದಾಗಿ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದಿರುವ ಚಿತ್ರಗಳೇ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವನ್ನು ಕೊಟ್ಟಿವೆ. ಗಂಗಾ ನದಿ ಮತ್ತು ಉತ್ತರ ಪ್ರದೇಶ ರಾಜ್ಯವು ಬಿಜೆಪಿಯ ರಾಜಕಾರಣದ ಕೇಂದ್ರದಲ್ಲಿದೆ. ಹಿಂದೂಗಳ ಪವಿತ್ರ ನಗರ ವಾರಾಣಸಿಯನ್ನು ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಗಂಗಾ ನದಿಯನ್ನು ತಾಯಿ ಎಂದು ‍ಪೂಜಿಸಲಾಗುತ್ತದೆ. ಕೋವಿಡ್‌–19 ತಂದ ದುರಂತವು ‘ಬ್ರ್ಯಾಂಡ್‌ ಯೋಗಿ’ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ) ಮಾತ್ರವಲ್ಲ ‘ಬ್ರ್ಯಾಂಡ್‌ ಮೋದಿ’ಗೂ ಹೊಡೆತ ಕೊಡುವ ಶಕ್ತಿಯನ್ನು ಹೊಂದಿದೆ. ಮೋದಿಯವರ ಹೆಸರಿನಲ್ಲಿಯೇ ಚುನಾವಣೆ ಗೆಲ್ಲುತ್ತಿರುವ ಪಕ್ಷಕ್ಕೆ ಇದು ಚಿಂತೆಯ ವಿಷಯವಾಗಿದೆ.

ಇದು ರಾಜಕೀಯವಾಗಿ ಮಾಡಬಹುದಾದ ಹಾನಿಯ ಬಗ್ಗೆ ಪಕ್ಷಕ್ಕೆ ಅರಿವಾಗಿದೆ. ಹಾಗಾಗಿಯೇ ಸರ್ಕಾರದ ಬಗೆಗಿನ ಗ್ರಹಿಕೆ ಬದಲಿಸುವ ಪ್ರಯತ್ನ ಆರಂಭವಾಗಿದೆ. ನಡ್ಡಾ ಅವರು ಹಲವು ರಾಜ್ಯಗಳ ಮುಖಂಡರ ಜತೆಗೆ ಕಳೆದ ವಾರ ಸಭೆ ನಡೆಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಬೇಕು. ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಜತೆ ಕಾಣಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

ಮುಖಂಡರ ಅಸಮಾಧಾನ: ಉತ್ತರ ಪ್ರದೇಶದಲ್ಲಿ ಪಕ್ಷದ ಮುಖಂಡರಲ್ಲಿಯೇ ಅಸಮಾಧಾನ ಸೃಷ್ಟಿಯಾಗಿರುವುದು ಬಿಜೆಪಿಯ ಚಿಂತೆಗೆ ಇನ್ನೊಂದು ಕಾರಣ. ನಿರಂತರ ಆಮ್ಲಜನಕ ಪೂರೈಕೆ, ಅಗತ್ಯವಿರುವಷ್ಟು ರೆಮ್‌ಡಿಸಿವಿರ್‌ ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಕ್ಷದ ಸಂಸದರಾದ ಕೌಶಲ್‌ ಕಿಶೋರ್ ಮತ್ತು ರಾಜೇಂದ್ರ ಅಗರ್‌ವಾಲ್‌ ಹಾಗೂ ರಾಜ್ಯದ ಸಚಿವ ಬ್ರಿಜೇಶ್‌ ಪಾಠಕ್‌ ಅವರು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಸಂಪುಟ ಪುನರ್‌ರಚನೆ?
ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯ ಮಾತು ಬಹಳ ಹಿಂದೆಯೇ ಕೇಳಿ ಬಂದಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ ಸಂಪುಟ ಪುನರ್‌ರಚನೆ ಮಾಡಿ, ಸರ್ಕಾರದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ. ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್‌ ರಾವತ್‌ ಮತ್ತು ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಸರ್ವಾನಂದ ಸೋನೊವಾಲ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪಕ್ಷ ಕೆಳಗಿಳಿಸಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಹಾಗೆಯೇ, ಕಾಂಗ್ರೆಸ್‌ ನಿಂದ ವಲಸೆ ಬಂದಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೂ ಸ್ಥಾನ ಕಲ್ಪಿಸಬೇಕಿದೆ. ಅವರ ವಲಸೆಯಿಂದಾಗಿಯೇ ಮಧ್ಯಪ‍್ರದೇಶ ಕಾಂಗ್ರೆಸ್‌ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ.  ಜತೆಗೆ, ಕೆಲವು ಸಚಿವರ ತಲೆದಂಡ ಪಡೆದು ಹೊಸಬರನ್ನು ನೇಮಿಸುವ ಮೂಲಕ ಸರ್ಕಾರವು ಸಕ್ರಿಯವಾಗಿದೆ ಎಂಬ ಸಂದೇಶ ರವಾನಿಸುವ ಉದ್ದೇಶವೂ ಬಿಜೆಪಿಗೆ ಇದೆ ಎನ್ನಲಾಗಿದೆ. 

Leave a Reply

Your email address will not be published. Required fields are marked *

error: Content is protected !!