‘ಗೂಗಲ್‌ ಪೇ’ ಸುರಕ್ಷಿತ: ರಾಷ್ಟ್ರೀಯ ಪಾವತಿ ನಿಗಮ ಸ್ಪಷ್ಟನೆ

ಬೆಂಗಳೂರು: ಗೂಗಲ್‌ ಪೇ ಆ್ಯಪ್‌ ಅನಧಿಕೃತವಾಗಿದ್ದು, ಅದರ ಮೂಲಕ ನಡೆಯುವ ಹಣ ವರ್ಗಾವಣೆಗೆ ಕಾಯ್ದೆಯಡಿ ರಕ್ಷಣೆ ಇಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ನಂಬಬಾರದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ತಿಳಿಸಿದೆ.

ಗೂಗಲ್‌ ಪೇ ಅನ್ನು ಥರ್ಡ್‌ಪಾರ್ಟಿ ಆ್ಯಪ್‌ ಪ್ರೊವಿಡರ್‌  (ಟಿಪಿಎಪಿ) ಎಂದು ವರ್ಗೀಕರಿಸಲಾಗಿದ್ದು, ಇತರ ಸಂಸ್ಥೆಗಳಂತೆಯೇ ‘ಯುಪಿಐ’ ಪಾವತಿ ಸೇವೆ ಒದಗಿಸುತ್ತಿದೆ. ‘ಎನ್‌ಪಿಸಿಐ’ನ ‘ಯುಪಿಐ’ ಚೌಕಟ್ಟಿನಡಿ ಬ್ಯಾಂಕಿಂಗ್‌ ಪಾಲುದಾರರ ಜತೆ ಕಾರ್ಯನಿರ್ವಹಿಸುತ್ತಿದೆ. ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಎನ್ನುವುದು ಮೊಬೈಲ್‌ ಮೂಲಕ ಎರಡು ಬ್ಯಾಂಕ್‌ ಖಾತೆಗಳ ಮಧ್ಯೆ ತಕ್ಷಣಕ್ಕೆ ಹಣ ವರ್ಗಾಯಿಸುವ ವ್ಯವಸ್ಥೆಯಾಗಿದೆ. ಯುಪಿಐ ಆ್ಯಪ್‌ಗಳನ್ನು ದೇಶದಲ್ಲಿ ‘ಥರ್ಡ್‌ ಪಾರ್ಟಿ ಆ್ಯಪ್‌’ ಎಂದು ವರ್ಗೀಕರಿಸಲಾಗಿದೆ.

ಎಲ್ಲ ಅಧಿಕೃತ ‘ಟಿಪಿಎಪಿ’ಗಳು ರಾಷ್ಟ್ರೀಯ ಪಾವತಿ ನಿಗಮದ ಅಂತರ್ಜಾಲ ತಾಣದಲ್ಲಿ ಪಟ್ಟಿಯಾಗಿವೆ. ಯಾವುದೇ ಅಧಿಕೃತ ‘ಟಿಪಿಎಪಿ’ ಬಳಸಿ ನಡೆಯುವ ಎಲ್ಲ ವಹಿವಾಟುಗಳು ಆರ್‌ಬಿಐ ಮತ್ತು ‘ಎನ್‌ಪಿಸಿಐ’ ರೂಪಿಸಿರುವ ಮಾರ್ಗದರ್ಶಿ ಸೂತ್ರ ಮತ್ತು ಪರಿಹಾರ ಪ್ರಕ್ರಿಯೆಯ ಸುರಕ್ಷತೆಗೆ ಒಳಪಟ್ಟಿವೆ. ಎಲ್ಲ ಅಧಿಕೃತ ‘ಟಿಪಿಎಪಿ’ಗಳು ದೇಶದಲ್ಲಿನ ಕಾನೂನು ಮತ್ತು ನಿಯಂತ್ರಣ ಕ್ರಮಗಳಿಗೆ ಬದ್ಧವಾಗಿರುತ್ತವೆ. ‘ಯುಪಿಐ’ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಗೂಗಲ್‌ ಪೇ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ನಂಬಬಾರದು ಎಂದು ‘ಎನ್‌ಪಿಸಿಐ’,  ಬಳಕೆದಾರರಲ್ಲಿ ಮನವಿ ಮಾಡಿಕೊಂಡಿದೆ.

ಗೂಗಲ್‌ ಪೇ ಹೇಳಿಕೆ: ಗೂಗಲ್‌ ಪೇ ಆ್ಯಪ್‌ ಮೂಲಕ ನಡೆಯುವ ಹಣ ಪಾವತಿಯು  ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವ ಪರಿಹಾರ  ಪ್ರಕ್ರಿಯೆಯ ರಕ್ಷಣೆಗೆ ಒಳಪಟ್ಟಿದೆ. ಗೂಗಲ್‌ ಪೇ ಆ್ಯಪ್‌ ಅನಧಿಕೃತ ಎಂದು ಆರ್‌ಬಿಐ, ದೆಹಲಿ ಹೈಕೋರ್ಟ್‌ಗೆ ತಿಳಿಸಿಲ್ಲ ಎಂದು ಗೂಗಲ್‌ ಪೇ ತಿಳಿಸಿದೆ.

 ಅದೊಂದು  ‘ಟಿಪಿಎಪಿ’ ಆಗಿದ್ದು, ಯಾವುದೇ ರೀತಿಯ ಪಾವತಿ ವ್ಯವಸ್ಥೆ  ನಿರ್ವಹಿಸುತ್ತಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!