ಲಸಿಕೆ ಖರೀದಿಗೆ ಕಾಂಗ್ರೆಸ್ ಸಹಾಯ ಹಸ್ತ: ಶಾಸಕರ ನಿಧಿಯಿಂದ 100 ಕೋಟಿ ರೂ ನೆರವು: ಸಿದ್ದರಾಮಯ್ಯ
ಬೆಂಗಳೂರು: ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಲಸಿಕೆ ಖರೀದಿಗೆ ಸರ್ಕಾರಕ್ಕೆ ಕಾಂಗ್ರೆಸ್ ಸಹಾಯ ಹಸ್ತ ಚಾಚಿದೆ. ಈ ವಿಷಯವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ, ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರತಿ ಶಾಸಕರು ಒಂದು ಕೋಟಿ ರೂಪಾಯಿಗಳನ್ನು ನೀಡುವ ಮೂಲಕ 100 ಕೋಟಿ ರೂಪಾಯಿ ಸಂಗ್ರಹ ಮಾಡಿ ಸರ್ಕಾರಕ್ಕೆ ನೀಡುತ್ತೇವೆ ಎಂದು ಹೇಳಿದರು.
ಪ್ರತಿ ಶಾಸಕರು, ಸಂಸದರಿಗೆ ಪ್ರತಿವರ್ಷ ನೀಡಲಾಗುವ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ 1 ಕೋಟಿ ರೂಪಾಯಿಯನ್ನು ನೀಡಲಾಗುತ್ತದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ 2 ಕೋಟಿ ರೂಪಾಯಿ, ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ತಲಾ 5 ಕೋಟಿ ರೂಪಾಯಿ ಸಿಗುತ್ತದೆ, ಅದರಡಿ ರಾಜ್ಯದಲ್ಲಿರುವ 95 ಮಂದಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕೊರೋನಾ ಲಸಿಕೆಗೆ ಹಣ ನೀಡಲಿದ್ದಾರೆ ಎಂದರು. ಅದನ್ನು ಸರ್ಕಾರ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ನೇರವಾಗಿ ಖರೀದಿಸಲು ಅವಕಾಶ ನೀಡಿ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಲಸಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ತಯಾರಿ ಮಾಡಿಕೊಳ್ಳದೇ ಇರೋದೇ ಈ ಎಲ್ಲಾ ಸಮಸ್ಯೆಗೆ ಕಾರಣ ಎಂದು ಹೇಳಿದರು. ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಕೇವಲ ಕಾಂಗ್ರೆಸ್ಸಿನ ಹೇಳಿಕೆಯಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಒಂದೇ ಅಭಿಪ್ರಾಯ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರಕ್ಕೆ 2ನೆ ಅಲೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸೂಕ್ತ ತಯಾರಿ ಕೈಗೊಳ್ಳೋದನ್ನ ಬಿಟ್ಟು ಜವಾಬ್ದಾರಿಯಿಂದ ಜಾರಿಕೊಂಡಿದೆ. ರಾಜ್ಯದ ಸಿಎಂ ಯಡಿಯೂರಪ್ಪ ನಿದ್ರಾವಸ್ಥೆಯಲ್ಲಿದ್ದಾರೆ. ಲಸಿಕೆಯ ಮೊದಲ ಡೋಸ್ ಹಾಗೂ 2ನೇ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಇಂದಿಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಲಸಿಕೆ ನೀಡಲು 18 ರಿಂದ 45 ವರ್ಷದ ಜನರಿಗೆ ಎರಡು ಡೋಸ್ ನಂತೆ 7 ಕೋಟಿ ಡೋಸ್ ಬೇಕಾಗಿದ್ದು 2100 ಕೋಟಿ ರೂಪಾಯಿ ಹಣ ಬೇಕು. ರಾಜ್ಯ ಸರ್ಕಾರಕ್ಕೆ ಇದೆಲ್ಲ ಗೊತ್ತಿದ್ದರೂ ಕೈಕಟ್ಟಿ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನಾ ಲಸಿಕೆ ಖರೀದಿ ಮಾಡಿ ಜನರಿಗೆ ಸರಿಯಾಗಿ ನೀಡುವಲ್ಲಿ ಕೇಂದ್ರದ ಮೋದಿ ಹಾಗೂ ರಾಜ್ಯದ ಬಿ ಎಸ್ ವೈ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಂಪೆನಿಯಿಂದ ನೇರವಾಗಿ ಖರೀದಿ ಮಾಡಲು ಅವಕಾಶ ನೀಡಿ ಎಂದು ನಾವು ಸರ್ಕಾರವನ್ನು ಕೇಳುತ್ತೇವೆ. ಲಸಿಕೆ ಉತ್ಪಾದಕ ಕಂಪೆನಿಗಳಿಂದ ನೇರವಾಗಿ ಲಸಿಕೆ ಸಂಗ್ರಹಿಸಿ ಜನರಿಗೆ ವಿತರಿಸಲು ನೆರವಾಗಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಡೋಸ್ ಗಳ ಮಧ್ಯೆ ಅಷ್ಟೊಂದು ಅಂತರವೇಕೆ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಜವಬ್ದಾರಿ ಯಿಂದ ವರ್ತಿಸುತ್ತಿದೆ. ಕೋವಿಶೀಲ್ಡ್ ಲಸಿಕೆ ಡೋಸ್ ನೀಡಿಕೆಯಲ್ಲಿ 14ರಿಂದ 16 ವಾರಗಳ ಅಂತರವೇಕೆ, ಲಸಿಕೆ ನೀಡುವ ವಿಚಾರದಲ್ಲಿ ಕೂಡ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ, ತಜ್ಞರು ಹೇಳುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ನನಗನಿಸುತ್ತಿದೆ ಎಂದು ಆರೋಪಿಸಿದರು.