ನ್ಯಾಯಾಧೀಶರೇನು ಸರ್ವಜ್ಞರಲ್ಲ- ಸಿ.ಟಿ.ರವಿ

ಬೆಂಗಳೂರು: ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ ಎಂಬ ಸದಾನಂದಗೌಡರ ಮಾತಿಗೆ ಧ್ವನಿಗೂಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ನ್ಯಾಯಾಧೀಶರೇನು ಸರ್ವಜ್ಞರಲ್ಲ. ಕೇಂದ್ರವಿರಲಿ, ರಾಜ್ಯವಿರಲಿ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಸುಪ್ರೀಂಕೋರ್ಟ್‌ಗೂ ಕೇಂದ್ರ ಸರ್ಕಾರ ಈ ವಿಚಾರವನ್ನು ಹೇಳಿದೆ. ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್‌ ಕೂಡಾ ಒಪ್ಪಿದೆ ಎಂದು ಹೇಳಿದರು.

ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಪ್ರಬಲವಾಗಿದೆ. ವೈರಾಣು ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕಾಗಿ ನಮ್ಮ ಸಿದ್ಧತೆ ಸಾಕಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಸಾಂಕ್ರಾಮಿಕ ಮತ್ತು ಸಾವನ್ನು ಮುಂದಿಟ್ಟುಕೊಂಡು ಕೆಲವರು ವಿಕೃತ ಆನಂದ ಪಡೆಯುತ್ತಿರುವುದು ದುರಂತ ಎಂದು ಸಿ.ಟಿ.ರವಿ ತಿಳಿಸಿದರು.

ಸಾಂಕ್ರಾಮಿಕ ಮತ್ತು ಸಾವಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈಗಿನ ಸಾವು ನೋವಿಗೆ ಚೀನಾ ವೈರಸ್‌ ಕಾರಣ. ಈ ವೈರಸ್‌ ಅನ್ನು ದೂರಬೇಕೆ ಹೊರತು ಪ್ರಧಾನಿ ಮೋದಿಯವರನ್ನಲ್ಲ. ವಿದೇಶಗಳಲ್ಲಿ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣವನ್ನು ಹೋಲಿಸಿ ನೋಡಲಿ. ಇಟಲಿಯಲ್ಲಿ ಎಷ್ಟು ಸೋಂಕು– ಸಾವು ಆಗಿದೆ ನೋಡಿ. ಅಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿಲ್ಲವಲ್ಲ ಎಂದು ವ್ಯಂಗ್ಯವಾಡಿದರು. 

Leave a Reply

Your email address will not be published. Required fields are marked *

error: Content is protected !!