ಒಗ್ಗಟ್ಟಾಗಿ ಹಸಿದವರ ಹಸಿವೆಯನ್ನು ನೀಗಿಸೋಣ- ಈದುಲ್ ಫಿತ್ರ್ ಸಂದೇಶ

ಮುಸ್ಲಿಮರ ಪವಿತ್ರ ರಮಝಾನ್‌ ತಿಂಗಳ ಸಮಾಪ್ತಿಯೊಂದಿಗೆ ‘ಈದುಲ್ ಫಿತ್ರ್‌’  ಬರುತ್ತದೆ. ಅರಬ್ಬಿಯಲ್ಲಿ “ಈದ್” ಎಂದರೆ ‘ಹಬ್ಬ’ ಎಂದೂ “ಫಿತ್ರ್” ಎಂದರೆ ‘ಮುಕ್ತಾಯ’ ಎಂಬ ಅರ್ಥ ಬರುತ್ತದೆ. ರಮಝಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಮೊದಲದಿನ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ‘ಈದುಲ್ ಫಿತ್ರ್‌’ ನ ಸಂಭ್ರಮ.

ಇಸ್ಲಾಮಿನ 9 ನೇ ತಿಂಗಳು ರಮಝಾನ್. ಮಾನವರ ಸನ್ಮಾರ್ಗ ದರ್ಶನಕ್ಕಾಗಿ ಅವತೀರ್ಣಗೊಂಡ ಪವಿತ್ರ ಕುರ್ ಆನ್ ಅವತೀರ್ಣವಾದ ಮಾಸ ಇದಾದುರಿಂದ, ಆರೋಗ್ಯವಂತ ವಯಸ್ಕರಾದವರು ಈ ತಿಂಗಳು ಪೂರ್ತಿ ಉಪವಾಸವನ್ನಾಚರಿಸಿ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ತನ್ನ ಅನುಯಾಯಿಗಳಿಗೆ ನಿರ್ದೇಶಿಸಿದೆ ಇಸ್ಲಾಮ್.    ಮುಂಜಾನೆಯ ಪ್ರಭಾತ ನಮಾಝ್ ಗೆ  ಕರೆಕೊಡುವ ಆಝಾನ್ ಗೂ ಮುನ್ನ ಆಹಾರ, ಪಾನೀಯಗಳನ್ನು ಸೇವಿಸಬೇಕು. (ಇದಕ್ಕೆ ‘ ಸಹ್ರಿ’ ಎನ್ನುವರು) ಆ ನಂತರ ಸೂರ್ಯಾಸ್ತಮಾನದ ತನಕ ಆಹಾರ, ನೀರು ಏನನ್ನೂ ಸೇವಿಸುವಂತಿಲ್ಲ. ಸೂರ್ಯಾಸ್ತಮಾನವಾದ ತಕ್ಷಣ ಉಪವಾಸ ಮುರಿಯಬೇಕು. (ದಿನದ ಉಪವಾಸ ಕೊನೆಗೊಳಿಸುವುದಕ್ಕೆ “ಇಫ್ತಾರ್” ಎನ್ನುವರು).

ಉಪವಾಸ ವೃತ ಮುಸ್ಲಿಮರ ಪಾಲಿನ ತರಬೇತಿ
ತಿಂಗಳು ಪೂರ್ತಿ ಉಪವಾಸವನ್ನಾಚರಿಸುವ ಈ ವೃತವು ಕೇವಲ ಆರಾಧನೆಯಾಗಿರದೆ ಅನಿಯಮಿತ ದೇಹೇಚ್ಛೆಗಳಿಗೆ ಕಡಿವಾಣ ಹಾಕಿಕೊಂಡು, ಆತ್ಮನಿಯಂತ್ರಣವನ್ನು  ಕಲಿಸುವ ತರಬೇತಿಯೂ ಆಗಿದೆ.ಮುಂಜಾನೆಯಿಂದ ಸಂಜೆಯವರೆಗೆ ಸತತ 12 ರಿಂದ 14 ಗಂಟೆಗಳ ಕಾಲ ಉಪವಾಸನ್ನಾಚರಿಸುವ ವ್ಯಕ್ತಿಯೋರ್ವನಿಗೆ (ವಿಶ್ವಾಸಿಗೆ) ಯಾರೂ ನೋಡದಂತೆ, ಕೋಣೆಯ ಬಾಗಿಲು ಹಾಕಿಕೊಂಡು ತಿಂದು, ಕುಡಿದು ತೋರಿಕೆಗಾಗಿ ತನ್ನನ್ನು ಉಪವಾಸಿಗ ಎಂದು ಬಿಂಬಿಸಿಕೊಂಡು ಸಂಜೆ ಎಲ್ಲರ ಜೊತೆ ಉಪವಾಸವನ್ನು ತೊರೆಯುವ ಅವಕಾಶಗಳಿದ್ದರೂ ಯಾವೊಬ್ಬ ಉಪವಾಸಿಗನೂ ಹಾಗೆ ಮಾಡುವ ಧೈರ್ಯ ತೋರುವುದಿಲ್ಲ‌  ‘ಜನರ ಕಣ್ಣುಗಳಿಂದ ಮರೆಯಾದರೂ, ದೇವನ ದೃಷ್ಟಿಯಿಂದ ಮರೆಯಾಗಲು ಸಾಧ್ಯವಿಲ್ಲ. ದೇವನು ಸದಾ ನನ್ನನ್ನು ನೋಡುತ್ತಿದ್ದಾನೆ ಎಂಬ ಪರಿಕಲ್ಪನೆ ಉಪವಾಸಿಗನಲ್ಲಿ ಜಾಗೃತಗೊಳಿಸ ಬಯಸುತ್ತದೆ ಇಸ್ಲಾಮ್. 

ಉಪವಾಸದ ತಿಂಗಳಲ್ಲಿ “ದೇವನು ನನ್ನನ್ನು ನೋಡುತ್ತಿದ್ದಾನೆ ಎಂಬ ಪರಿಕಲ್ಪನೆ” ಉಪವಾಸಿಗನನ್ನು ಕದ್ದುಮುಚ್ಚಿ ತಿನ್ನುವುದರಿಂದ ತಡೆದಂತೆ, ವರ್ಷದ ಉಳಿದ 11 ತಿಂಗಳುಗಳೂ ತನ್ನ ಅನುಯಾಯಿ ಕೆಟ್ಟ ಕಾರ್ಯಗಳಿಂದ, ಸುಳ್ಳುಗಳಿಂದ, ಮೋಸ ವಂಚನೆಗಳನ್ನೆಸಗುವುದರಿಂದ ತನ್ನನ್ನು ತಾನು ಕಾಪಾಡಿಕೊಳ್ಳಲಿ, ದೇವನು ಸದಾ ನನ್ನೆಲ್ಲಾ ಕಾರ್ಯಗಳನ್ನು ವೀಕ್ಷಿಸುತ್ತಿದ್ದಾನೆಂಬುದು ಸದಾ ಅವನ ಸ್ಮೃತಿಪಟಲದಲ್ಲಿರಲಿ, ಈ ಮೂಲಕ ಸಮಾಜದಲ್ಲಿ ಅವನೊಬ್ಬ ಉತ್ತಮ ಪ್ರಜೆಯಾಗಿ ಜೀವಿಸಲಿ ಎಂದು ಆಶಿಸುತ್ತದೆ ಇಸ್ಲಾಮ್.

ಹಸಿದವರ ಹಸಿವೆಯನ್ನು ನೀಗಿಸಲು ಕರೆ
ನಿರಂತರ ಒಂದು ತಿಂಗಳು ಹಸಿವೆಯ ಅನುಭವವನ್ನು ಮಾಡಿಸಿ, ವರ್ಷಪೂರ್ತಿ ಅರೆಹೊಟ್ಟೆ ತಿನ್ನುವ ಬಡವರ ಕಷ್ಟವನ್ನು ಅರಿತು, ಅವರ ಹಸಿವೆಯನ್ನು ನೀಗಿಸಲು ಕರೆಕೊಡುತ್ತದೆ ಇಸ್ಲಾಮ್. ಹೀಗಾಗಿಯೇ *ಪಕ್ಕದ ಮನೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಇಸ್ಲಾಮಿನ ನೈಜ ಅನುಯಾಯಿ ಆಗಲು ಸಾಧ್ಯವಿಲ್ಲ* ಎಂದರು ಪ್ರವಾದಿವರ್ಯರಾದ ಮುಹಮ್ಮದರು (ಸ). ಇನ್ನೊಂದು ಸಂದರ್ಭದಲ್ಲಿ, *ಅಲ್ಲಾಹನ ಸಂಪ್ರೀತಿಯನ್ನು ಪಡೆಯುವ ಮಾರ್ಗಗಳು ಯಾವುವು” ಎಂದು ಪ್ರವಾದಿವರ್ಯರ (ಸ) ಅನುಚರರು ಅವರ ಬಳಿ ಕೇಳಿದಾಗ, “ಹಸಿದವರಿಗೆ ಉಣಬಡಿಸುವುದು, ಅವರ ಹಸಿವೆಯನ್ನು ನೀಗಿಸುವುದು ಅಲ್ಲಾಹನ ಸಂಪ್ರೀತಿ ಪಡೆಯುವ ಮಾರ್ಗಗಳಲ್ಲೊಂದು”* ಎಂದುತ್ತರಿಸಿದರು ಪ್ರವಾದಿ ಮುಹಮ್ಮದರು (ಸ).

ಭಾರತದೆಲ್ಲೆಡೆ ಕರೋನಾ ಸಾಂಕ್ರಾಮಿಕ ರೋಗ ಹರಡಿ, ಲಾಕ್ಡೌನ್ ಆಗಿ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾವೆಲ್ಲರೂ  ಸರಳವಾಗಿ ಈದ್ ಆಚರಿಸಿಕೊಂಡು, ಇಸ್ಲಾಮ್ ನಮಗೆ ನಿರ್ದೇಶಿಸಿದಂತೆ ಜಾತಿ,ಮತ ಭೇದವಿಲ್ಲದೆ ಜನರ ಸಂಕಷ್ಟಗಳನ್ನು ದೂರಮಾಡಲು  ಶ್ರಮಿಸುವ ಮೂಲಕ  ಈ ಬಾರಿಯ ಈದ್ ನ ನೈಜ ಸಂದೇಶವನ್ನು ಸಾರೋಣ. *ಬನ್ನಿ, ಒಗ್ಗಟ್ಟಾಗಿ ಹಸಿದವರ ಹಸಿವೆಯನ್ನು ನೀಗೀಸೋಣ, ಕರೋನಾ ಸಾಂಕ್ರಾಮಿಕ ರೋಗ ಹಬ್ಬದಂತೆ ತಡೆಯಲು ನಮ್ಮಿಂದಾದ ಅಳಿಲು ಸೇವೆ ಸಲ್ಲಿಸೋಣ. ಜಾತಿ,ಮತ ಭೇದವಿಲ್ಲದೆ, ಸಕಲ ಗೌರವಾದಾರಗಳೊಂದಿಗೆ ಕರೋನಾದಿಂದ ಮೃತರಾದವರ ಮೃತದೇಹಗಳ ಅಂತ್ಯ ಸಂಸ್ಕಾರಗಳಿಗೆ ಹೆಗಲು ಕೊಡೋಣ 

ಅಬ್ದುಲ್ ಅಝೀಝ್, ಉದ್ಯಾವರ ಜಿಲ್ಲಾಧ್ಯಕ್ಷರು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ. ಉಡುಪಿ ಜಿಲ್ಲೆ

Leave a Reply

Your email address will not be published. Required fields are marked *

error: Content is protected !!