ಪ್ರಧಾನಿ ಮೋದಿ ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಜನ ಸೇವೆಗೆ ಬದ್ಧರಾಗಿರಬೇಕು: ಸಿಡಬ್ಲ್ಯೂಸಿ

ನವದೆಹಲಿ: ಕೊರೋನಾ ವೈರಸ್ ಬಿಕ್ಕಟ್ಟು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಮತ್ತು ಸಾವು ನೋವುಗಳನ್ನು ಮರೆತು ತನ್ನ “ವೈಯಕ್ತಿಕ ಕಾರ್ಯಸೂಚಿಯನ್ನು” ಮುಂದುವರಿಸುವ ಬದಲು ಜನ ಸೇವೆ ಮಾಡಲು ಬದ್ಧರಾಗಿರಬೇಕು ಎಂದು ಸೋಮವಾರ ಹೇಳಿದೆ.

ಕಾಂಗ್ರೆಸ್ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿ ಸಿಡಬ್ಲ್ಯೂಸಿ ಒಂದು ನಿರ್ಣಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತು ಸಾವುನೋವುಗಳ ಕುರಿತಾದ ಸರ್ಕಾರದ ದತ್ತಾಂಶವನ್ನು ಪ್ರಶ್ನಿಸಿದೆ ಮತ್ತು ಹಲವು ಸಾವುಗಳನ್ನು ವರದಿ ಮಾಡಿಲ್ಲ ಎಂದು ಆರೋಪಿಸಿದೆ.

ಪರಿಹಾರವು ಸವಾಲನ್ನು ಎದುರಿಸುವುದರಲ್ಲಿದೆ, ಸತ್ಯವನ್ನು ಮರೆಮಾಚುವಲ್ಲಿ ಅಲ್ಲ ಎಂದು ಕಾಂಗ್ರೆಸ್ ಉನ್ನತ ಸಮಿತಿ ಹೇಳಿದೆ.

ಸರ್ಕಾರದ ಕೊರೋನಾ ವೈರಸ್ ವ್ಯಾಕ್ಸಿನೇಷನ್ ತಂತ್ರದ ಬಗ್ಗೆಯೂ ಸಿಡಬ್ಲ್ಯುಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪೂರೈಕೆ ಕೊರತೆ ಇದೆ ಮತ್ತು ಲಸಿಕೆ ಬೆಲೆ ನೀತಿ ಅಪಾರದರ್ಶಕವಾಗಿಲ್ಲ. ತಾರತಮ್ಯವಾಗಿದೆ ಎಂದು ದೂರಿದೆ.

ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಮಾತನಾಡಿ, ಇದು ರಾಷ್ಟ್ರೀಯ ಐಕ್ಯತೆ, ಉದ್ದೇಶ ಮತ್ತು ಸಂಕಲ್ಪದ ಅಚಲ ಪ್ರಜ್ಞೆಯನ್ನು ತೋರಿಸುವ ಸಮಯ ಎಂದು ಸಿಡಬ್ಲ್ಯೂಸಿ ದೃಢವಾಗಿ ನಂಬಿದೆ ಎಂದು ಹೇಳಿದ್ದಾರೆ.

ಇಂದು ವರ್ಚುವಲ್ ಮೂಲಕ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು, ಕೋವಿಡ್-19 ಮಹಾಮಾರಿಯಿಂದ ದೇಶ ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ನಾವಿಂದು ಸಭೆ ಸೇರಿ ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಸೇರಿದ್ದೇವೆ. ಚುನಾವಣೆಯಲ್ಲಿ ನಾವು ಕಂಡ ವೈಫಲ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಫಲಿತಾಂಶದಿಂದ ತೀರಾ ನಿರಾಶರಾಗಿದ್ದೇವೆ ಎಂದು ಹೇಳುವುದು ಸಣ್ಣ ಮಾತಾಗಬಹುದು ಎಂದರು

Leave a Reply

Your email address will not be published. Required fields are marked *

error: Content is protected !!