ರೈತರಿಗೆ,ಚಾಲಕ, ಕುಶಲಕರ್ಮಿ, ಕಾರ್ಮಿಕರಿಗೆ, 10,000 ರೂ. ಹಾಗೂ ಆಹಾರ ಕಿಟ್ ನೀಡಿ: ಸಿದ್ದರಾಮಯ್ಯ ಪತ್ರ
ಬೆಂಗಳೂರು ಮೇ.8: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ಸರಕಾರ ನೂತನ ಪರಿಷ್ಕೃತ ಮಾರ್ಗ ಸೂಚಿಯನ್ನು ರಾಜ್ಯಾದ್ಯಂತ ಜಾರಿ ಮಾಡಿದೆ. ಈ ನಡುವೆ ಸೋಂಕು ನಿಯಂತ್ರಿಸಲು ಸಲಹೆಗಳನ್ನು ನೀಡಿ ವಿಪಕ್ಷ ನಾಯಕ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಬರೆದಿದ್ದಾರೆ. ಈ ಪತ್ರದಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ನಿಯಂತ್ರಣ ಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಆದ್ದರಿಂದ ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಹಾಗೂ ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕು. ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಆಕ್ಸಿಜನ್ ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಆಕ್ಸಿಜನ್ ಉತ್ಪಾದನೆ ಆಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿರುವ ಅವರು, ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೆ ಕನಿಷ್ಟ ಮಟ್ಟದ ಮೊತ್ತವನ್ನು ನಿಗಧಿ ಪಡಿಸಲಾಗಿದೆ. ಅದರಿಂದ ಸಮರ್ಪಕವಾಗಿ ರೆಮ್ಡಿಸಿವಿರ್ ನಂಥ ಔಷಧಗಳನ್ನೂ ನೀಡಲಾಗುತ್ತಿಲ್ಲ ಎಂಬ ಮಾಹಿತಿ ಇದೆ. ಈ ಅವ್ಯವಸ್ಥೆಯನ್ನು ಸರಿ ಮಾಡಬೇಕು. ಹಾಗೂ ರಾಜ್ಯದ ಅಸಹಾಯಕ ರೋಗಿಗಳಿಗೆ ಸಾಮಾನ್ಯ, ಐ.ಸಿ.ಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇರುವ ಸಾಕಷ್ಟು ಬೆಡ್ಗಳನ್ನು ಸ್ಥಾಪಿಸಲು ಯಾವ ಸಮಸ್ಯೆ ಇದೆ? ಬೆಡ್ಗಳು ಎಷ್ಟು ಬೇಕಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಕಾರ್ಯೋನ್ಮಖರಾಗಬೇಕು ಎಂದು ಸೂಚನೆ ನೀಡಿದ್ದಾರೆ.
ವೈದ್ಯರುಗಳಿಗೆ ಸಂಬಂಧಿಸಿದಂತೆ, ಖಾಸಗಿ, ನಿವೃತ್ತರಾದವರನ್ನು ಅಗತ್ಯ ಬಿದ್ದರೆ ನೇಮಿಸಿಕೊಳ್ಳಬೇಕು. ದಾದಿಯರ ವಿಷಯದಲ್ಲೂ ಹಾಗೆ ಮಾಡಬೇಕು. ಈಗಾಗಲೇ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವ ಅಂತಿಮ ವರ್ಷಗಳಲ್ಲಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜಿಸಬೇಕು. ಅಗತ್ಯ ಬಿದ್ದರೆ ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೆಲುಗಳು ಮುಂತಾದವುಗಳನ್ನು ತಾತ್ಕಾಲಿಕ ಆಸ್ಪತ್ರೆ ಮಾಡಿ ಚಿಕಿತ್ಸೆ ನೀಡಿ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಖಾಲಿ ಜಾಗವನ್ನು ಹುಡುಕಿ ವ್ಯವಸ್ಥಿತವಾಗಿ ಶವ ಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಜನ ಉದ್ಯೋಗಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ನೀಡಬೇಕು. ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂಗಳನ್ನು ನೀಡಬೇಕು. ನಂತರ ತಿಂಗಳಿಗೆ ರೂ.6,000 ರೂಗಳನ್ನು ನೀಡಬೇಕು. ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ 10,000 ರೂಗಳನ್ನು ನೀಡಬೇಕು.
ನಗರಗಳಿಂದ ಹಳ್ಳಿಗಳಿಗೆ ದುಡಿಯುವ ಜನ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಬೇಕು. ಕನಿಷ್ಟ 200 ಮಾನವ ದಿನಗಳ ಯೋಜನೆಯನ್ನು ಜಾರಿಗೊಳಿಸಬೇಕು. ಅಗತ್ಯ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು. ಪ್ರಸ್ತುತ ಇರುವ ಹಣದುಬ್ಬರವನ್ನು ಆಧರಿಸಿ ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಬೇಕು ಮತ್ತು ಹೆಚ್ಚಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ 4 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹೀಗೆ ತಾವು ಮುಖ್ಯಮಂತ್ರಿ ಗಳಿಗೆ ಬರೆದ ಪತ್ರದಲ್ಲಿ ಸಲಹೆಗಳನ್ನು ನೀಡಿರುವ ಅವರು, ತಮ್ಮ ಸಲಹೆಗಳನ್ನು ಗಂಭಿರವಾಗಿ ಪರಿಗಣಿಸಿ , ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.